ಸಿಎಂ ದುಬಾರಿ ವಾಚ್ ಪ್ರಕರಣ: "ಉಡುಗೊರೆ ಹಿಂದೆ ಭ್ರಷ್ಟಾಚಾರ" ಎಂದ ಅನುಪಮಾ ಶೆಣೈ!

ಕೆಲ ದಿನಗಳ ಹಿಂದೆ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೂಬ್ಲೋಟ್ ವಾಚ್ ಪ್ರಕರಣಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೊಸ ತಿರುವು ನೀಡಿದ್ದು, ವಾಚ್ ಉಡುಗೊರೆ ಹಿಂದೆ ಬೃಹತ್ ಭ್ರಷ್ಟಾಚಾರ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಲ ದಿನಗಳ ಹಿಂದೆ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೂಬ್ಲೋಟ್ ವಾಚ್ ಪ್ರಕರಣಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೊಸ ತಿರುವು ನೀಡಿದ್ದು, ವಾಚ್  ಉಡುಗೊರೆ ಹಿಂದೆ ಬೃಹತ್ ಭ್ರಷ್ಟಾಚಾರ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ವಾಚ್ ಉಡುಗೊರೆ ಹಿಂದೆ ಭ್ರಷ್ಟಾಚಾರ ನಡೆದಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪಮಾ ಶೆಣೈ ಅವರು,  ಸಿದ್ದರಾಮಯ್ಯ ಅವರಿಗೆ 70 ಲಕ್ಷ ಮೌಲ್ಯದ ಹೂಬ್ಲೋಟ್ ವಾಚನ್ನು ಉಡುಗೊರೆಯಾಗಿ ನೀಡಿದ ಗಿರೀಶ್ ಚಂದ್ರ ವರ್ಮಾ ದುಬೈನ ಎನ್‍ಎಂಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎನ್‍ಎಂಸಿ ಆಸ್ಪತ್ರೆಗೆ ಉಡುಪಿಯಲ್ಲಿ ಸರ್ಕಾರಿ  ಆಸ್ಪತ್ರೆ ನಿರ್ವಹಣೆ ಗುತ್ತಿಗೆ ನೀಡಲಾಗಿದ್ದು, ಜೊತೆಗೆ ಜೋಗ್‍ ಫಾಲ್ಸ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಗುತ್ತಿಗೆಯನ್ನೂ ನೀಡಲಾಗಿದೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರೆಗೆ ಗಿರೀಶ್ ಚಂದ್ರ ವರ್ಮಾ  ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ ಎಂದು ಅನುಪಮಾ ಶೆಣೈ ಆರೋಪಿಸಿದ್ದಾರೆ.

ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯುವ ಈ ಎರಡೂ ಯೋಜನೆಗಳಿಂದ ಸುಮಾರು 400 ಕೋಟಿ ರೂ.ಗೂ ಅಧಿಕ ವಹಿವಾಟು ನಡೆದಿದೆ. ಹೀಗಾಗಿ ಗಿರೀಶ್ ಚಂದ್ರವರ್ಮಾ ನೀಡಿರುವ ದುಬಾರಿ ಬೆಲೆಯ ವಾಚ್ ಪ್ರಕರಣ  ಭ್ರಷ್ಟಾಚಾರ ವ್ಯಾಪ್ತಿಗೆ ಬರಲಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುವಂತೆ ಅನುಪಮಾ ಶೆಣೈ ಒತ್ತಾಯಿಸಿದ್ದಾರೆ. ತಾವು ಪಡೆದ ವಾಚ್‍ನಿಂದ ಸೃಷ್ಟಿಯಾದ ವಿವಾದ ತೀವ್ರ ಸ್ವರೂಪ ತಲುಪಿದಾಗ ಸಿದ್ದರಾಮಯ್ಯ  ಅವರು ಆಗಿನ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮುಖಾಂತರ ಸಚಿವ ಸಂಪುಟ ಸಭಾಂಗಣದಲ್ಲಿ ವಾಚನ್ನು ಇರಿಸಿದ್ದಾರೆ. ಈವರೆಗೂ ಸಿವಿಲ್ ಮೊಕದ್ದಮೆಯಾಗಿತ್ತು, ಇನ್ನು ಮೇಲೆ ಕ್ರಿಮಿನಲ್ ಮೊಕದ್ದಮೆ ಎಂದು  ಪರಿಗಣಿಸಲಾಗುವುದು ಎಂದು ಅನುಪಮಾ ಶೆಣೈ ಹೇಳಿದ್ದಾರೆ.

ಅಲ್ಲದೆ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಡೆಸಿರುವ ಭ್ರಷ್ಟಾಚಾರಕ್ಕೆ ಏಕೈಕ ಪ್ರಮುಖ ಸಾಕ್ಷ್ಯವಾಗಿ ಉಳಿದಿರುವ 'ಹ್ಯೂಬ್ಲೋಟ್‌ ಬಿಗ್‌ ಬ್ಯಾಂಗ್‌' ವಾಚ್‌ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಿ' ಎಂದು ವಿಧಾನ  ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಮನವಿ ಪತ್ರ ಕೂಡ ಬರೆದಿದ್ದಾರೆ. ಪ್ರಸ್ತುತ ವಾಚು ಯಾರ ಅಧೀನದಲ್ಲಿದೆಯೋ ಅವರ ಮೂಲಕ ಒಂದು ಎಫ್‌ಐಆರ್‌ ದಾಖಲಿಸಲು ಆದೇಶ ನೀಡಬೇಕು. ಈ ಮೂಲಕ ಸಿದ್ದರಾಮಯ್ಯ ಅವರ  ಭ್ರಷ್ಟಾಚಾರಕ್ಕೆ ಪ್ರಮುಖ ಸಾಕ್ಷ್ಯವಾಗಿರುವ ವಾಚನ್ನು ರಕ್ಷಣೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ವಾಚ್ ಅನ್ನು ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರಿಗೆ ಹಸ್ತಾಂತರಿಸಿ ವಿಧಾನಸೌಧದ ಸಚಿವ  ಸಂಪುಟ ಸಭಾಂಗಣದಲ್ಲಿ ಇಡಲು ಸೂಚಿಸಲಾಗಿತ್ತು. ಅದನ್ನು ಯಾರೂ ಕದ್ದೊಯ್ಯದಂತೆ ಹಾಗೂ ನಾಶ ಮಾಡದಂತೆ ರಕ್ಷಣೆ ಮಾಡಬೇಕು'' ಎಂದು ಅನುಪಮಾ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com