
ಬೆಂಗಳೂರು: ಮಳೆಗಾಗಿ ರಾಜ್ಯ ನೀರಾವರಿ ಸಚಿವ ಎಂಬಿ ಪಾಟೀಲ್ ಅವರು ನಡೆಸಿದ ಪರ್ಜನ್ಯ ಹೋಮ ಇದೀಗ ವಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದ್ದು, ಸಮಾಜವಾದಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ವಿಪಕ್ಷಗಳು ವಿಧಾನಸಭೆಯಲ್ಲಿ ವ್ಯಾಪಕ ತರಾಟೆಗೆ ತೆಗೆದುಕೊಂಡವು.
ನಿಯಮ 69ರಡಿ ಬರಗಾಲದ ಕುರಿತ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಈ ವಿಷಯ ಪ್ರಸ್ತಾಪಿಸಿ ಮಾತಿಗೆಳೆದರು. "ಮೌಡ್ಯ ನಿಷೇಧ ಕಾನೂನು ಜಾರಿ ಮಾಡುವ ನೀವು ಪರ್ಜನ್ಯ ಹೋಮ ಮಾಡುತ್ತಿದ್ದೀರಿ. ಈ ಬಗ್ಗೆ ವಿಚಾರವಾದಿಗಳು ಮತ್ತು ಸ್ವಾಮೀಜಿ ಗಳೇಕೆ ಮಾತನಾಡುತ್ತಿಲ್ಲ? ನಿಮ್ಮ ದೊಂಬರಾಟ ಈಗ ಬಯಲಾಗಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯರಿಂದ ಬಸವಣ್ಣ ಅವರಿಗೆ ಅಪಮಾನವಾಗಿದೆ. ಬಸವಣ್ಣನ ನಾಡಿನಿಂದ ಬಂದ ಎಂಬಿ ಪಾಟೀಲರಿಂದ ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ ಈ ಬಗ್ಗೆ ಸಿಎಂ ಈ ಬಗ್ಗೆ ಸ್ಪಷ್ಟಪಡಿಸಲಿ' ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, "ಯಾವುದು ಮೂಢನಂಬಿಕೆ, ಯಾವುದು ನಂಬಿಕೆ... ಎನ್ನುವುದು ಮೊದಲು ನಿರ್ಧಾರವಾಗಬೇಕು. ವೈಯಕ್ತಿಕವಾಗಿ ಪರ್ಜನ್ಯ ಹೋಮ, ಪೂಜೆಯನ್ನು ನಾನು ಒಪ್ಪುವುದಿಲ್ಲ. ನಂಬಿಕೆ ಮತ್ತು ಮೂಢ ನಂಬಿಕೆ ಪ್ರಶ್ನೆ ಬಂದಾಗ, ಆಚರಣೆಗಳಿಂದ ಸಮಾಜಕ್ಕೆ ತೊಂದರೆಯಾದರೆ ಮೂಢ ನಂಬಿಕೆ ಎನ್ನಬೇಕಾಗುತ್ತದೆ. ಮೌಡ್ಯ ನಿಷೇಧ ವಿಧೇಯಕ ಜಾರಿಯ ಚರ್ಚೆ ವೇಳೆ ಈ ಬಗ್ಗೆ ಮಾತನಾಡೋಣ' ಎಂದರು.
ಅಂತೆಯೇ ತಮ್ಮ ಮಾತು ಮುಂದುವರೆಸಿ "ಪೂಜೆ ಮಾಡಿಸಿದ್ದು ಎಂ.ಬಿ.ಪಾಟೀಲರು. ಅದು ಅವರ ಹಣ, ಅವರ ನಂಬಿಕೆ' ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಶೆಟ್ಟರ್, "ಮುಖ್ಯಮಂತ್ರಿಯಾಗಿ ಸಹೋದ್ಯೋಗಿ ಸಚಿವರೊಬ್ಬರು ಮೌಡ್ಯ ಆಚರಣೆ ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತೀದ್ದೀರಿ ಎಂದರೆ ಖೇದವೆನಿಸುತ್ತದೆ. ಹಾಗಾದರೆ, ಮೌಡ್ಯ ನಿಷೇಧ ಕಾನೂನಿನ ಔಚಿತ್ಯವೇನು? ಎಂದು ಪ್ರಶ್ನಿಸಿದರು.
ಶೆಟ್ಟರ್ ಮಾತಿನಿಂದ ಸ್ವಲ್ಪ ಗರಂ ಆದ ಸಿಎಂ, "ನೀವು ಹೋಮವನ್ನು ವಿರೋಧಿಸುತ್ತೀರಾ ಎಂದು ಬಿಜೆಪಿಯವರೇ ಆದ ಸಿ.ಟಿ.ರವಿ ಅವರನ್ನು ಪ್ರಶ್ನಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಪ್ರಕೃತಿಯಲ್ಲಿ ಕೆಲವು ಅಗೋಚರ ಶಕ್ತಿಗಳಿವೆ ಎನ್ನುವುದನ್ನು ನಾನು ನಂಬುತ್ತೇನೆ. ಹಾಗೇ ಹೋಮವನ್ನುನಂಬುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ ಎಂದರು. ಮೌಡ್ಯ ವಿರೋಧಿ ಸರ್ಕಾರ ಎಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇಕೆ ಪರ್ಜನ್ಯ ಹೋಮಕ್ಕೆ ಅವಕಾಶ ಕೊಟ್ಟರು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನಿಸಿದಾಗ, ಅವರದ್ದೇ ಪಕ್ಷದ ಸಿ.ಟಿ.ರವಿ, ನಾನು ಪರ್ಜನ್ಯ ಹೋಮ ಮತ್ತು ಪೂಜೆ ಮಾಡಿದ್ದನ್ನು ವಿರೋಧಿಸಲಾರೆ, ಆಗೋಚರ ಶಕ್ತಿಗಳ ಬಗ್ಗೆ ನಂಬಿಕೆ ಇದೆ ಎಂದು ಸ್ಪಷ್ಟ ಪಡಿಸಿದರು.
Advertisement