ತಪ್ಪು ಮಾಹಿತಿ ಪ್ರಸಾರ ಮಾಡಿದ ಮಾಧ್ಯಮದ ವಿರುದ್ಧ ಕಾನೂನು ಕ್ರಮ: ಎಂಎಲ್ ಸಿ ಗೋವಿಂದರಾಜು
ಬೆಂಗಳೂರು: ವಿವಾದಿತ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮ ಹಾಗೂ ಪತ್ರಿಕೆ ತಪ್ಪು ಮಾಹಿತಿ ಪ್ರಸಾರ ಮಾಡಿದ್ದು, ಈ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ವಿಧಾನಪರಿಷತ್ ಸದಸ್ಯ ಕೆ ಗೋವಿಂದರಾಜು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೆಸರು ನಮೂದಾಗಿತ್ತು ಎನ್ನಲಾದ ಸಹಾರಾ-ಬಿರ್ಲಾ ಡೈರಿ, ಬಿಜೆಪಿ ಹೈಕಮಾಂಡ್‌ಗೆ ಕಪ್ಪ ನೀಡಿದ ಕುರಿತಂತೆ ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ನಡುವಣ ಸಂಭಾಷಣೆ ಮತ್ತು ಗೋವಿಂದರಾಜು ಅವರಿಗೆ ಸಂಬಂಧಿಸಿದ್ದು ಎನ್ನಲಾದ ಡೈರಿ ಕುರಿತಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆ ವೇಳೆ ತಾವು ಹೇಳಿದ್ದೇ ಬೇರೆ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದೇ ಬೇರೆ ಎಂದು ಗೋವಿಂದರಾಜು ಸ್ಪಷ್ಟಪಡಿಸಿದ್ದಾರೆ.
ಐಟಿ ದಾಳಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಯಾವುದೇ ಡೈರಿಯನ್ನು ನನ್ನಿಂದ ವಶಪಡಿಸಿಕೊಂಡಿಲ್ಲ. ಈ ಕುರಿತಂತೆ ವಿಧಿವಿಜ್ಞಾನ ಪ್ರಯೋಗಾಲಯದಿಂದ ಡೈರಿ ಸತ್ಯಾಸತ್ಯತೆಯ ಬಗ್ಗೆ ತನಿಖೆಯಾಗಲಿ ಎಂದೂ ಐಟಿ ಇಲಾಖೆಗೆ ಕೋರಿದ್ದೇನೆ. ಆದಾಗ್ಯೂ ನಕಲಿ ದಾಖಲೆಗಳನ್ನು ತೋರಿಸಿ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಈ ಕುರಿತು ಸುದ್ದಿ ಪ್ರಸಾರ ಮಾಡಿದ ರಾಷ್ಟ್ರೀಯ ಸುದ್ದಿವಾಹಿನಿ ಹಾಗೂ ಪತ್ರಿಕೆ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ. ಹೀಗಾಗಿ ಈ ಬಗೆಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ನಾನು ಹಿಂದೆಯೂ ಡೈರಿ ಹಾಗೂ ಅದರಲ್ಲಿರುವ ವಿವರಗಳು ನನಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಹೀಗಿದ್ದೂ ಕೆಲ ಮಾಧ್ಯಮ ಸಮೂಹಗಳು ನನ್ನ ಮೇಲೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ದು, ನಿನ್ನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರದರ್ಶಿಸಿದ ದಾಖಲೆಗಳು ತಿರುಚಿದ ನಕಲಿ ದಾಖಲೆಗಳು ಎಂದು ಸ್ಪಷ್ಟಪಡಿಸಿದರು.
2016ರ ಮೇ 3ರಂದು ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದೆ. ಅದನ್ನು ತಿರುಚಿ ವರದಿ ಮಾಡಲಾಗುತ್ತಿದೆ. ನಾನು ತೆರಿಗೆ ಅಧಿಕಾರಿಗಳಿಗೆ ಎಕೆಜಿ-9 ಎಂದು ನೀಡಿದ್ದ ಹೇಳಿಕೆಯನ್ನು ಎಕೆಜಿ- 3 ಎಂದು ತೋರಿಸಲಾಗುತ್ತಿದೆ. ‘ನನ್ನ ಮನೆಯ ಮಲಗುವ ಕೋಣೆಯಲ್ಲಿ ದೊರೆತಿದೆ ಎಂದು ಹೇಳುತ್ತಿರುವ ಡೈರಿ ನನ್ನದಲ್ಲ. ಹೀಗಾಗಿ ಅದನ್ನು ಆಧರಿಸಿ ಕೇಳುತ್ತಿರುವ ಪ್ರಶ್ನೆಯೇ ಆಧಾರರಹಿತ. ತಾವು ಪ್ರಶ್ನೆಯಲ್ಲಿ ಕೇಳುತ್ತಿರುವ ನಾಯಕರು ಕಾಂಗ್ರೆಸ್ಸಿನ ಉನ್ನತ ಹಾಗೂ ಗೌರವಾನ್ವಿತ ನಾಯಕರು. ಹೀಗಾಗಿ ಆ ನಾಯಕರ ಹೆಸರನ್ನು ಉಲ್ಲೇಖಿಸಬೇಡಿ. ಅದನ್ನು ನಾನು ಖಂಡಿಸುತ್ತೇನೆ' ಎಂದು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ‘ಗೌರವಾನ್ವಿತ ನಾಯಕರು' ಎಂದಿದ್ದಷ್ಟನ್ನೇ ಕಟ್ ಮಾಡಿ ಅಪೂರ್ಣ ಅಂಶಗಳನ್ನು ತೋರಿಸುವ ಮೂಲಕ ಮಾಧ್ಯಮಗಳು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡದ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಅವರು, ಇಡೀ ಪ್ರಕರಣ ರಾಜಕೀಯ ಷಡ್ಯಂತ್ರವಾಗಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ