
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅಶ್ವ ಮೇಧ ಯಾಗದ ಕುದುರೆಯನ್ನು ನಾವು ಕಟ್ಟಿಹಾಕಿ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ ಸ್ವಾಮಿ ಅವರು, "ಉತ್ತರ ಪ್ರದೇಶ ಹಾಗೂ ರಾಜ್ಯದ ಚುನಾವಣಾ ಪರಿಸ್ಥಿತಿ ಗಳೆರಡೂ ಬೇರೆ ಬೇರೆಯಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಅಶ್ವಮೇಧ ಯಾಗವನ್ನು ತಡೆಯುವುದು ಜೆಡಿಎಸ್‍ನಿಂದ ಮಾತ್ರ ಸಾಧ್ಯ. ಪಂಚರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ನಡೆದ ರಾಜಕೀಯ ತಂತ್ರ ಕರ್ನಾಟಕದಲ್ಲಿ ನಡೆಯುವುದಿಲ್ಲ. ಉತ್ತರ ಪ್ರದೇಶದ 10ವರ್ಷದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರ ಸ್ವಾಮಿ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಸಾಧಿಸಿದ್ದ ಸಾಧನೆಯಾದರೂ ಏನು? ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಚರ್ಚೆಯಾಗುತ್ತದೆಯೇ ಎಂದು ವ್ಯಂಗ್ಯವಾಡಿದರು. ಅಂತೆಯೇ ನಂಜನಗೂಡು-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಸ್ಪರ್ಧಿಸದೆ ದೂರ ಉಳಿಯುವುದು ಸೂಕ್ತ ಎಂಬುದು ತಮ್ಮ ಅಭಿಪ್ರಾಯ ಎಂದ ಕುಮಾರ ಸ್ವಾಮಿ ಅವರು, ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಅವರು ಮುಖ್ಯಮಂತ್ರಿ ಹಾಗೂ ತಮ್ಮ ನಡುವಿನ ಚುನಾವಣೆ ಇದಾಗಿದೆ ಎಂದು ಹೇಳಿದ್ದಾರೆ. ಅತ್ತ ಯಡಿಯೂರಪ್ಪ ಅವರು ಅಧರ್ಮದ ವಿರುದ್ಧ ಚುನಾವಣೆ ಎನ್ನುತ್ತಾರೆ. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಧರ್ಮಾಧಿಕಾರಿಗಳೇ ಎಂದು ಪ್ರಶ್ನಿಸಿದರು.
ಇಂತಹ ಆರೋಪ-ಪ್ರತ್ಯಾರೋಪ, ಕೆಸರೆರಚಾಟ ನೋಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂದೆನಿಸುತ್ತದೆ. ಬಿಜೆಪಿ ನಾಯಕರ ಚುನಾವಣಾ ಉತ್ಸಾಹ ನೋಡಿದರೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಚುನಾವಣೆ ಯಾವಾಗ ಬರುತ್ತದೋ, ಇನ್ನು ಆರು ತಿಂಗಳೊಳಗೆ ಬಂದರೂ ಆಶ್ಚರ್ಯವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಪರೇಷನ್ ಕಮಲದಿಂದಾಗಿ 20 ಉಪಚುನಾವಣೆಗಳು ನಡೆದವು. ಆದರೆ ಜೆಡಿಎಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ನಮ್ಮ ನೆರವಿನಿಂದ ಗೋವಿಂದರಾಜನಗರ ವಿಧಾನಸಭಾಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಹೀಗಾಗಿ ಚುನಾವಣೆಗೆ ಹೆದರಿ ಹಿಂದೇಟು ಹಾಕುತ್ತಿಲ್ಲ. ಈ ಎರಡು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇದೇ ಮಾರ್ಚ್ 15ರಂದು ಶಾಸಕರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಉಪಚುನಾವಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
Advertisement