

ಬೆಂಗಳೂರು: ಸದ್ಯ ನಡೆಯುತ್ತಿರುವ ಕೇಂದ್ರ ಬಜೆಟ್ ಅಧಿವೇಶನದ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಬಿಜೆಪಿ ಸಂಸದರು ತಮಗೂ ಸಂಪುಟದಲ್ಲಿ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದಿಂದ ಅನಂತ್ ಕುಮಾರ್, ಡಿ.ವಿ ಸದಾನಂದಗೌಡ ಮತ್ತು ರಮೇಶ್ ಜಿಗಜಿಣಗಿ ಅವರು ಕೇಂದ್ರ ಸಚಿವರಾಗಿ ಅವಕಾಶ ಪಡೆದುಕೊಂಡಿದ್ದಾರೆ.
ಈ ಹಿಂದಿನ ಪುನಾರಚನೆಯಲ್ಲಿ ಪ್ರಧಾನಿ ಮೋದಿ, ಸಂಸದ ಸಿದ್ದೇಶ್ವರ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ರಮೇಶ್ ಜಿಗಜಿಣಗಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದರು.
ಈ ಬಾರಿಯೂ ಲಿಂಗಾಯಿತರಿಗೆ ಕೇಂದ್ರ ಸಂಪುಂಟದಲ್ಲಿ ಸ್ಥಾನ ಗಳಿಸಿಕೊಳ್ಳಲು ಕಸರತ್ತು ಆರಂಭವಾಗಿದೆ, ಲಿಂಗಾಯಿತ ಸಮುದಾಯದವರಿಗೆ ಸಂಪುಟದಲ್ಲಿ ಅವಕಾಶಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ರಾಜ್ಯ ಸಂಸದರ ಸಭೆ ನಡೆಯಲಿದ್ದು, ಬೆಳಗಿನ ಉಪಹಾರದ ಭೇಟಿಯ ನಂತರ ಈ ವಿಷಯ ಸಂಬಂಧ ಚರ್ಚೆ ನಡೆಸುವ ಸಾಧ್ಯತೆಯಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್ -150 ಕಾರ್ಯಾಚರಣೆ ಯಶಸ್ವಿಗಾಗಿ, ಮೋದಿ ಸಂಪುಟದಲ್ಲಿ ರಾಜ್ಯದಿಂದ ಮತ್ತಿಬ್ಬರಿಗೆ ಅವಕಾಶ ನೀಡಬೇಕೇಂದು ಮೋದಿ ಅವರಿಗೆ ಒತ್ತಡ ಹಾಕುವುದಾಗಿ ಬಿಜೆಪಿ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.
ಬೆಳಗಾವಿಯ ಸುರೇಶ್ ಅಂಗಡಿ, ಬಾಗಲಕೋಟೆಯ ಪಿ.ಸಿ ಗದ್ದಿಗೌಡರ್, ಹಾಗೂ ಪ್ರಭಾಕರ್ ಕೋರೆ ಬಿಜೆಪಿಯಿಂದ ಆಯ್ಕೆಯಾಗಿರುವ ರಾಜ್ಯದ ಸಂಸದರಾಗಿದ್ದಾರೆ.