

ಬೆಂಗಳೂರು: ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತಿರುವ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ಶೀಘ್ರವೇ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೈನಿಕವೊಂದು ವರದಿ ಮಾಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯಿಂದ ವಿಶ್ವನಾಥ್ ಅವರು ಬೇಸತ್ತಿದ್ದು, ಜೆಡಿಎಸ್ ಸೇರ್ಪಡೆಯತ್ತ ಒಲವು ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಸೋಮವಾರ ಸಂಜೆ ಅವರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು ಎಂದು ಹೇಳಲಾಗಿದೆ. ವಿಶ್ವನಾಥ್ ಅವರ ಈ ಭೇಟಿ ಇದೀಗ ತೀವ್ರ ಕುತೂಹಲ ಕೆರಳಿಸಿದ್ದು, ಈ ಮಾತುಕತೆ ಬಳಿಕ ಜೆಡಿಎಸ್ ಸೇರ್ಪಡೆ ಖಚಿತವಾಗಿದ್ದು, ಮೈಸೂರು ನಗರದಲ್ಲಿ ಶಕ್ತಿ ಪ್ರದರ್ಶನದ ಮೂಲಕವೇ ವಿಶ್ವನಾಥ್ ಅವರೊಂದಿಗೆ ಹಳೆ ಮೈಸೂರು ಭಾಗದ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಲು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೆರಡು ದಿನಗಳಲ್ಲಿ ಸಮಾವೇಶದ ಸ್ಥಳ ಮತ್ತು ದಿನಾಂಕ ನಿಗದಿಯಾಗಲಿದ್ದು, ಹುಣಸೂರಿನಿಂದ ವಿಶ್ವನಾಥ್ ಸ್ಪರ್ಧೆಗೆ ಎಚ್ ಡಿ ದೇವೇಗೌಡ ಅವರು ಒಪ್ಪಿಗೆ ನೀಡಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
Advertisement