
ಬೆಂಗಳೂರು: ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ವೈ. ಮೇಟಿಗೆ ಸಿಐಡಿ ಅಧಿಕಾರಿಗಳು ಕ್ಲೀನ್ ಚಿಟ್ ನೀಡಿದ್ದಾರೆ.
ಪ್ರಕರಣದ ಸುದೀರ್ಘ ತನಿಖೆ ನಡೆಸಿರುವ ಸಿಐಡಿ, ಪ್ರಕರಣದ ಸಂಪೂರ್ಣ ವರದಿಯನ್ನು ಗೃಹಇಲಾಖೆಗೆ ನೀಡಿದೆ. ವರದಿಯಲ್ಲಿ ಇದೊಂದು ‘ರಾಜಕೀಯ ದುರುದ್ದೇಶ ಪೂರ್ವ ಸಂಚಿನ ಕೃತ್ಯ’ ಹೇಳಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಹಗರಣಕ್ಕೆ ಸೂಕ್ತ ಸಾಕ್ಷ್ಯಾಧಾರ ತನಿಖೆ ವೇಳೆ ಲಭ್ಯವಾಗಿಲ್ಲ. ಮಾಧ್ಯಮದಲ್ಲಿ ಪ್ರಸಾರಗೊಂಡ ವಿಡಿಯೋ ಎಡಿಟ್ ಆಗಿದ್ದು, ಅಸಲಿ ವಿಡಿಯೋ ಅಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
"ಅಸಲಿ ವಿಡಿಯೋ ದೊರೆಯದ ಕಾರಣ ಸಮರ್ಪಕವಾಗಿ ತನಿಖೆ ನಡೆಸಲು ಸಾಧ್ಯವಾಗಿಲ್ಲ. ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆಯನ್ನು ವಿಚಾರಣೆ ನಡೆಸಿದಾಗ ‘ನನ್ನ ಮತ್ತು ಮೇಟಿ ಅವರದ್ದು ತಂದೆ-ಮಗಳ ಸಂಬಂಧ, ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ’ ಎಂದು ಹೇಳಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಸಂತ್ರಸ್ತೆ ದೂರು ನೀಡದೆ ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಎಂದೂ ವರದಿಯಲ್ಲಿ ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. ಮೇಟಿಯವರ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ಸಿಡಿ ರೂಪಿಸಲಾಗಿದೆ ಎಂದು ಸರ್ಕಾರಕ್ಕೆ ಸಿಐಡಿ ವರದಿ ಸಲ್ಲಿದೆ.
ಕ್ಲೀನ್ ಚಿಟ್ ಸಿಕ್ಕಿದ್ದು ಸಂತಸ ತಂದಿದೆ: ಮೇಟಿ
ಇನ್ನು ಪ್ರಕರಣ ಸಂಬಂಧ ಸಿಐಡಿ ಕ್ಲೀನ್ ಚಿಟ್ ನೀಡಿದ್ದರ ಕುರಿತು ಮಾತನಾಡಿದ ಮೇಟಿ ಅವರು, ಸಿಐಡಿ ಕ್ರಮ ಸಂತಸತಂದಿದೆ. ನಾನು ನಿರಪರಾಧಿ, ಸುಖಾಸುಮ್ಮನೆ 6 ತಿಂಗಳು ಮಾನಸಿಕ ಹಿಂಸೆ ಅನುಭವಿಸಿದೆ. ಸಿಐಡಿ ತನಿಖೆಯಲ್ಲಿ ಕ್ಲೀನ್ಚಿಟ್ ಸಿಕ್ಕಿದ್ದು ಸಂತಸ ತಂದಿದೆ. ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಒತ್ತಡ ಹಾಕುವುದಿಲ್ಲ. ಆದರೆ ಮತ್ತೆ ಸಚಿವ ಸ್ಥಾನ ನೀಡಿದರೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement