ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಟ ಉಪೇಂದ್ರ ಅವರ 'ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ' (ಕೆಪಿಜೆಪಿ) ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮುಕ್ತ ಆಹ್ವಾನ ನೀಡಿದ್ದು, ಒಂದು ತಿಂಗಳೊಳಗಾಗಿ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ...
ಬೆಂಗಳೂರು: ಇತ್ತೀಚೆಗೆ ನೂತನವಾಗಿ ಅಸ್ತಿತ್ವಕ್ಕೆ ಬಂದ ನಟ ಉಪೇಂದ್ರ ಅವರ 'ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ' (ಕೆಪಿಜೆಪಿ) ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮುಕ್ತ ಆಹ್ವಾನ ನೀಡಿದ್ದು, ಒಂದು ತಿಂಗಳೊಳಗಾಗಿ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಶನಿವಾರ ಹೇಳಿದ್ದಾರೆ.
ಶನಿವಾರ ಪಕ್ಷದ ಪ್ರಜಾಕೀಯ ಆ್ಯಪ್ ಹಾಗೂ ವೆಬ್'ಸೈಟ್ ಬಿಡುಗಡೆ ಮಾಡಿ 'ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷದ ಅಧ್ಯಕ್ಷ ಉಪೇಂದ್ರ ಈ ಆಹ್ವಾನ ನೀಡಿದರು.
ನೂತ ಆ್ಯಪ್ ಪಕ್ಷದ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಗಳನ್ನು ತಿಳಿಸುವ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ರಾಜಕೀಯದಲ್ಲಿ ಆಸಕ್ತಿ ಇರುವ ಯಾರೇ ಆಗಲೀ ಈ ಆ್ಯಪ್ ಮೂಲಕ ಪಕ್ಷವನ್ನು ಸಂಪರ್ಕಿಸಬಹುದು.
ವಿದ್ಯಾವಂತರು, ಅವಿದ್ಯಾವಂತರು ಆದರೂ ಪರವಾಗಿಲ್ಲ. ಸಮಾಜ ಸೇವೆ ಸಲ್ಲಿಸುವ ಪ್ರಜ್ಞಾವಂತ ನಾಗರೀಕರು ಅರ್ಜಿ ಸಲ್ಲಿಸಬಹುದು. ಪಕ್ಷದ ಅಧ್ಯಕ್ಷರನ್ನು ಸುಲಭವಾಗಿ ಸಂಪರ್ಕಿಸಲು, ಪಕ್ಷದ ಆಗುಹೋಗುಗಳ ಕುರಿತ ಸುದ್ದಿಗಳನ್ನು ತಿಳಿಯಲು ಇದರಲ್ಲಿ ಆಯ್ಕೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಈವರೆಗೂ 50 ರಿಂದ 60 ಸಾವಿರ ಮೇಲ್ ಗಳು ಬಂದಿವೆ. ಸಾಕಷ್ಟು ಅರ್ಜಿಗಳನ್ನು ಈಗಾಗಲೇ ನಾವು ಪರಿಶೀಲನೆ ನಡೆಸಿದ್ದೇವೆ. ಆ್ಯಪ್ ಹಾಗೂ ವೆಬ್ ಸೈಟ್ ನಿಂದ ಜನರು ನಮ್ಮನ್ನು ಸುಲಭವಾಗ ಸಂಪರ್ಕಿಸಬಹುದು. ಅರ್ಜಿಯೊಂದಿಗೆ ಹೇಗೆ ಮುನ್ನಡೆಯಬೇಕೆಂಬುದನ್ನು ಆ್ಯಪ್ ಮತ್ತು ವೆಬ್ ಸೈಟ್ ಮೂಲಕ ಜನರು ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಶಿಕ್ಷಣಿಕ ಅರ್ಹತೆಗಳು ನಮಗೆ ಬೇಕಿಲ್ಲ. ಆದರೆ, ದೇಶದಲ್ಲಿ ಬದಲಾವಣೆ ತರುವ ಫಲ ಹೊಂದಿರುವವರು ನಮಗೆ ಬೇಕು ಎಂದಿದ್ದಾರೆ.