ಇದೇ ವೇಳೆ ಗ್ರಾಮ ವಾಸ್ತವ್ಯ ಕುರಿತಂತೆ ಮಾತನಾಡಿರುವ ಅವರು, ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ನಾನು ದಲಿತರ ಮನೆಯಲ್ಲಿ ಉಳಿಯುತ್ತಿದ್ದೆ. ಅವರು ಮಾಡಿದ್ದ ಊಟವನ್ನೇ ಸೇವಿಸುತ್ತಿದೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಇದೇ ವೇಳೆ ಸದಾಶಿವ ಆಯೋಗ ವರದಿ ಅನುಷ್ಠಾನ ಕುರಿತಂತೆ ನಾಯಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಸದಾಶಿವ ಆಯೋಗದ ವರದಿಯು ಸೂಕ್ಷ್ಮ ವಿಚಾರವಾಗಿದ್ದು, ದೊಡ್ಡಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಒಂದೆಡೆ ಮಾದಿಗ ಸಮುದಾಯವು ವರದಿ ಅನುಷ್ಠಾನಕ್ಕೆ ಆಗ್ರಹಿಸಿದರೆ, ಮತ್ತೊಂದೆಡೆ ಇತರೆ ಸಮುದಾಯವು ಆಂತಕಕ್ಕೊಳಗಾಗುತ್ತದೆ. ಒಳಪಂಗಡದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕು. ವರದಿ ಅನುಷ್ಠಾನಕ್ಕೂ ಮುನ್ನ ಲೋಪದೋಷಗಳಿದ್ದರೆ ಅವುಗನ್ನು ಸರಿ ಮಾಡಿ ಮುಂದಿನ ಹಜ್ಜೆ ಇಡಬೇಕು. ವರದಿ ಜಾರಿ ಸಂಬಂಧ ಎಲ್ಲರನ್ನೂ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಪ್ರಣಾಳಿಕೆ ಬಗ್ಗೆ ಮಾತನಾಡಿರುವ ಅವರು, ನಾನು ಜ್ಯೋತಿಷಿಯಲ್ಲ. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜನರ ಜೀವನವನ್ನು ಸುಧಾರಿಸಲು ಬಯಸಿರುವೆ. ನನ್ನಿಂದ ಏನನ್ನು ನಿರೀಕ್ಷಿಸುತ್ತಿದ್ದೀರಾ ಹೇಳಿ. ಪ್ರಣಾಳಿಕೆಯಲ್ಲಿ ಅದನ್ನು ಸೇರ್ಪಡೆಗೊಳಿಸುವೆಂ ಹಾಗೂ ಅದನ್ನು ಅನುಷ್ಠಾನಕ್ಕೆ ತರುವ ಕುರಿತಂತೆ ಕಾರ್ಯನಿರ್ವಹಿಸುವೆ ಎಂದಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆ ಹಲವು ಸಮುದಾಯಗಳು ತಮಗೆ ಎಸ್'ಟಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ಇದು ಕಾರ್ಯಸಾಧ್ಯವಲ್ಲ. ಹಣ ಬಲ ಇರುವವರಿಗೆ ಮಾತ್ರವೇ ನಾವು ಪಕ್ಷದ ಟಿಕೆಟ್ ನೀಡುತ್ತಿದ್ದೇವೆಂದು ಕೆಲ ಆರೋಪಗಳು ಕೇಳಿಬರುತ್ತಿವೆ. ಇದು ಸತ್ಯವಲ್ಲ. ಆದಾಯ ಕಡಿಮೆಯಿರುವ ಹಲವಾರು ಅಭ್ಯರ್ಥಿಗಳು ನಮ್ಮ ಪಕ್ಷದಲ್ಲಿದ್ದಾರೆ. ಅಂತಹವರಿಗೆ ಟಿಕೆಟ್ ನೀಡಿ, ಅವರ ಬಲವನ್ನು ಹೆಚ್ಚಿಸಲು ನಾವು ಬಯಸಿದ್ದೇವೆ. ಪ್ರತ್ಯೇಕ ಜಾತಿ ಕುರಿತಂತೆ ನಾವು ಸೀಮಿತಗೊಂಡಿಲ್ಲ. ಕೆಲವರು ನಮ್ಮ ತಂದೆ ಒಕ್ಕಲಿಗರ ನಾಯಕರೆಂದು ಹೇಳುತ್ತಾರೆ. ಆದರೆ, ಆವರು ಹಲವು ಸಮುದಾಯಗಳ ಬೆಂಬಲದೊಂದಿಗೆ ನಾಯಕರಾಗಿದ್ದಾರೆ.
ರಾಜ್ಯದಲ್ಲಿ ಮದ್ಯಪಾನಕ್ಕೆ ನಿಷೇಧ ಹೇರಿದರೆ, ಕುಡಿಯುವವರು ನಮ್ಮ ಪಕ್ಷಕ್ಕೆ ಮತಹಾಕುವುದಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ನಾನು ಸಾರಾಯಿ ಹಾಗೂ ಲಾಟರಿ ಟಿಕೆಟ್ ಗಳ ಮೇಲೆ ನಿಷೇಧ ಹೇರಿದ್ದೆ. ಆ ಸಂದರ್ಭದಲ್ಲಿ ನನ್ನ ಮೇಲೆ ಸಾಕಷ್ಟು ಒತ್ತಡಗಳಿದ್ದವು. ಆದರೂ, ನನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದೆ, ನಿಷೇಧ ಹೇರಿದ್ದೆ. ಮುಂದಿನ ದಿನಗಳಲ್ಲಿ ನಾನು ಅಧಿಕಾರಕ್ಕೆ ಬಂದರೆ ಇಂತಹದ್ದೇ ನಿರ್ಧಾರಗಳನ್ನು ಕೈಗೊಳ್ಳುವೆ ಎಂದಿದ್ದಾರೆ.
ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರಿಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೊಣೆಗಾರಿಕೆ ನೀಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದ ಕಾರ್ಯಚಟುವಟಿಕೆಯಲ್ಲಿ ತೊಡಗಿ ಕೊಳ್ಳಲಿ ಎಂಬ ಉದ್ದೇಶದಿಂದ ಪ್ರಜ್ವಲ್ ಅವರಿಗೆ ಪದಾಧಿಕಾರಿ ಹುದ್ದೆಯನ್ನು ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ಪದಾಧಿಕಾರಿಗಳಿಗೆಲ್ಲ ಟಿಕೆಟ್ ನೀಡಲಾಗುವುದು ಎಂದು ಅರ್ಥವಲ್ಲ. ಪಕ್ಷದಲ್ಲಿ 250 ಮಂದಿ ಪ್ರಮುಖ ಸ್ಥಾನಗಳಲ್ಲಿದ್ದಾರೆ. ಅವರಲ್ಲಿ ಪ್ರಜ್ವಲ್ ಕೂಡ ಒಬ್ಬರಾಗಿ ಪಕ್ಷ ಸಂಘಟನೆ ಕಲಸದಲ್ಲಿ ತೊಡಗಲಿದ್ದಾರೆಂದು ತಿಳಿಸಿದ್ದಾರೆ.