ನಿಮ್ಮ ಕುತಂತ್ರಕ್ಕೆ ಸೋಲಲು ನಾನು ಪರಮೇಶ್ವರ್ ಅಲ್ಲ: ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ

ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಹಿರಂಗ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ನಾಯಕರ ಆರೋಪ ಪ್ರತ್ಯಾರೋಪಗಳು ಮುಗಿಲುಮುಟ್ಟಿದ್ದು, ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಹಿರಂಗ ಪತ್ರದ ಮೂಲಕ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂಬ ಸಿಎಂ ಸಿದ್ಗರಾಮಯ್ಯ ಹೇಳಿಕೆ ಮತ್ತು ರಾಮನಗರ ರಾಜಕೀಯ ಮತ್ತು ಇತರ ರಾಜ್ಯ, ದೇಶ ರಾಜಕಾರಣದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಅಂತೆಯೇ ಸಿದ್ದರಾಮಯ್ಯ ಅವರ ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಚುನಾವಣೆಯಲ್ಲಿ ಸೋಲಲು ನಾನೇನು ಪರಮೇಶ್ವರ್ ಅಲ್ಲ.. ರಾಮನಗರ ಜನತೆಗೆ ನನ್ನ ಕಾರ್ಯಗಳೇನು ಎಂದು ಗೊತ್ತಿದೆ.. ಚುನಾವಣೆಯಲ್ಲಿ ಅವರೇ ಸಿದ್ದರಾಮಯ್ಯ ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಇನ್ನು ಸಿಎಂಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಬರೆದಿರುವ ಪತ್ರದ ಸಂಪೂರ್ಣ ಸಾರಾಂಶ ಇಲ್ಲಿದೆ.
'ಮಾನ್ಯ ಸಿದ್ದರಾಮಯ್ಯನವರು ಇತ್ತೀಚೆಗೆ ಜೆಡಿಎಸ್ ಪಕ್ಷ, ದೇವೇಗೌಡರು ಹಾಗೂ ನನ್ನ ಬಗ್ಗೆ ಹಲವು ಬಾರಿ ಟೀಕಿಸಿದ್ದಾರೆ. ದ್ವೇಷ ಭರಿತವಾಗಿ ಮಾತನಾಡಿದ್ದಾರೆ, ಪದೇ ಪದೆ ಅಪ್ಪನಾಣೆ ಎಂಬ ಪದಬಳಕೆ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಸೂಕ್ತ ಉತ್ತರ ನೀಡಲೇ ಬೇಕಾಗಿದೆ. ಅದಕ್ಕಾಗಿ ಸಿದ್ದರಾಮಯ್ಯಗೆ ಈ ಬಹಿರಂಗ ಪತ್ರ'.
'ಮೊದಲನೇದಾಗಿ... ಮಾಧ್ಯಮದವರು ನನ್ನ ಪ್ರಶ್ನೆ ಎತ್ತಿದ್ದರೆ ಸಾಕು ಅವರಪ್ಪನಾಣೆ ಗೆಲ್ಲಲ್ಲ ಎಂದು ನೀವು ಉದ್ಘರಿಸುತ್ತೀರಿ.‌ ತಂದೆಯೇ ಗುರು, ಗುರುವೇ ತಂದೆ. ಇದು ಇಡೀ ಭಾರತೀಯರ ನಂಬಿಕೆ‌. ಪದೇ ಪದೇ ಅವರಪ್ಪನಾಣೆ ಎನ್ನುವ ಮೂಲಕ ನೀವು ತಂದೆ ಸ್ಥಾನದಲ್ಲಿರುವವರಿಗೆ, ಗುರುಗಳಿಗೆ, ಇಡೀ ಭಾರತೀಯರ ನಂಬುಗೆಗಳಿಗೆ ಭಂಗ ತರುತ್ತಿದ್ದೀರಿ. ನೀವಿಡುತ್ತಿರುವ ಪ್ರತೀ ಪ್ರಮಾಣಗಳು ನಿಮ್ಮ ಭವಿಷ್ಯವನ್ನೇ ಸುತ್ತುವರಿಯಲಿವೆ ಎಚ್ಚರ. ಕಾಕತಾಳೀಯವೆಂಬಂತೆ ನನ್ನ ತಂದೆ ದೇವೇಗೌಡರು ನಿಮ್ಮ ರಾಜಕೀಯ ಗುರು. ಗುರುವಿಗೇ ಗೌರವ ಕೊಡದ, ಗುರುವಿಗೆ ನಿಷ್ಟರಲ್ಲದ ನೀವು ಜನರಿಗೆ ಗೌರವ ಕೊಡುವಿರೇ, ಜನರಿಗೆ ನಿಷ್ಠರಾಗಿರುತ್ತೀರೇ?'
'ಬಾಳಿ ಬದುಕಬೇಕಾದ ಯುವಕ, ನಿಮ್ಮ ಪುತ್ರ ಶ್ರೀಯುತ ರಾಕೇಶ್ ನಿಧನ ಹೊಂದಿದಾಗ ತಂದೆಯಾಗಿ ನೀವು ಪಟ್ಟ ಯಾತನೆ, ದುಃಖವನ್ನು ನೆನೆದು ಒಬ್ಬನೇ ಮಗನ ತಂದೆಯಾದ ನಾನೂ ಮಮ್ಮಲ ಮರುಗಿದ್ದೇನೆ. ನಾಡಿನ ತಂದೆ ತಾಯಿಯರೂ ದುಃಖಿಸಿದ್ದಾರೆ. ಅಂಥ ತಂದೆ ಸ್ಥಾನವನ್ನು ನೀವು ಗೇಲಿ ಮಾಡುವುದಾದರೆ, ಅಗೌರವಿಸುವುದಾದರೆ ಆಗಲಿ‌ ಬಿಡಿ. ಇದರ ಪರಾಮರ್ಶೆಯನ್ನು ನಾನು ಜನತಾ ನ್ಯಾಯಾಲಯಕ್ಕೆ ಬಿಡುತ್ತೇನೆ'.
ನನ್ನನ್ನು ಸೋಲಿಸುತ್ತೇನೆ ಎಂಬ ನಿಮ್ಮ ಮಾತುಗಳು ದ್ವೇಷ ರಾಜಕಾರಣದ ಪ್ರತೀಕ
ರಾಮನಗರದಲ್ಲಿ ನನ್ನನ್ನು ಸೋಲಿಸುತ್ತೇನೆ ಎಂಬ ನಿಮ್ಮ ಮಾತುಗಳು ದ್ವೇಷ ರಾಜಕಾರಣದ ಪ್ರತೀಕ. ನಿಮ್ಮ ರಾಜಕೀಯ ಜೀವನ ಏಳಿಗೆ ಕಂಡಿದ್ದೇ ಇನ್ನೊಬ್ಬರನ್ನು (ಉದಾಹರಣೆಗೆ: ಪರಮೇಶ್ವರ್) ಕುತಂತ್ರದಿಂದ ಸೋಲಿಸಿಯೇ ಅಲ್ಲವೇ? ಹಾಗಾಗಿ ಇನ್ನೊಬ್ಬರನ್ನು ಸೋಲಿಸಿಯೇ ನಿಮಗೆ ಅಭಿವೃದ್ಧಿ. ಆದರೆ ಸೋಲಲು ನಾನು ಪರಮೇಶ್ವರ್ ಅಲ್ಲ. ರಾಮನಗರ ನನ್ನ ರಾಜಕೀಯ ಜನ್ಮಭೂಮಿ. ಅಲ್ಲಿ ನೀವು 1ದಿನವಲ್ಲ. 1ತಿಂಗಳು ಪ್ರಚಾರ ನಡೆಸಿದರೂ ಅಲ್ಲಿನ ನನ್ನ ತಂದೆ ತಾಯಿಯರು ನನ್ನನ್ನು ಸೋಲಗೊಡರು. ಚನ್ನಪಟ್ಟಣವೂ ಕೂಡ. ನನಗೆ ಗೆಲುವು ನೀಡುವುದಕ್ಕೂ ಮೊದಲು ಅಲ್ಲಿನ ನನ್ನ ಜನ ನನ್ನನ್ನು ಮಗನಾಗಿ ಸ್ವೀಕರಿಸಿದ್ದಾರೆ. ನನ್ನ ಜನರ ನಡುವೆ ನನಗೆ ಇರುವುದು ಚುನಾವಣೆ, ರಾಜಕೀಯವನ್ನು ಮೀರಿದ ಸಂಬಂಧ. ಚುನಾವಣೆ ನಮ್ಮಿಬ್ಬರ ನಡುವೆ ನೆಪವಷ್ಟೇ. ಕ್ಷೇತ್ರದ ಜನರ ಮೇಲೆ ನನಗಿರುವ ಈ ನಿಷ್ಠೆ,
ಉಪಚುನಾವಣೆ ನಂತರ ಪಲಾಯನ ಮಾಡಿದ್ದ ಸಿದ್ದು
ಜನರಿಗೆ ನನ್ನ ಮೇಲಿರುವ ಈ ಮಟ್ಟಿಗಿನ ವಿಶ್ವಾಸ ನಿಮಗೆ ಚಾಮುಂಡೇಶ್ವರಿಯಲ್ಲಿ ಸಿಗಲು ಸಾಧ್ಯವೇ? ಅಲ್ಲಿನ ಜನರೂ ಕೂಡ ನನ್ನನ್ನೇ ಮನೆ ಮಗನಂತೆ ಕಾಣುತ್ತಾರೆಯೇ ವಿನಾ ಉಪಚುನಾವಣೆ ನಂತರ ಇವರ ಸಹವಾಸವೇ ಬೇಡ ಎಂದು ಪಲಾಯನ ಮಾಡಿದ್ದ ನಿಮ್ಮನ್ನಲ್ಲ. ಇಷ್ಟು ಸಾಕು ನಿಮಗೆ ಚಾಮುಂಡೇಶ್ವರಿಯಲ್ಲಿ ಗೆಲುವಾಗುತ್ತದೋ, ಸೋಲಾಗುತ್ತದೋ ಹೇಳಲು. ಇನ್ನು ನನ್ನ ಸೋಲಿಸಲು ಬರುವ ನಿಮಗೆ ಮುಖಭಂಗ ಖಚಿತ.
ಆಗ ಸಾಲ ಮನ್ನಾ ಮಾಡದವರು ಈಗೇಕೆ ಅದರ ಬಗ್ಗೆ ಮಾತನಾಡುತ್ತಿದ್ದಾರೆ?
ದೇವೇಗೌಡರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದವರು, ಆಗ ಸಾಲ ಮನ್ನಾ ಮಾಡದವರು ಈಗೇಕೆ ಅದರ ಬಗ್ಗೆ ಮಾತನಾಡುತ್ತಿದ್ದಾರೆ? ಎಂಬುದು ನಿಮ್ಮ ಇನ್ನೊಂದು ಪ್ರಶ್ನೆ, ಸ್ವಾಮಿ ಸಿದ್ದಾರಾಮಯ್ಯನವರೇ, ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಮಹಾನುಭಾವರಾದರೂ ಯಾರು? ತಾವೇ ಅಲ್ಲವೇ? ಹಣಕಾಸು ಸಚಿವರಾಗಿ, ಸಾಲ ಮನ್ನಾ ಮಾಡಬಹುದಾದ ಅವಕಾಶವಿದ್ದೂ, ಮಂತ್ರಿ ಮಂಡಲದ ಹಿರಿಯರಾಗಿ ತಾವೇಕೆ ದೇವೇಗೌಡರಿಗೆ ಸಾಲಮನ್ನಾದ ಕುರಿತು ಪ್ರಸ್ತಾವನೆ ಕೊಡಲಿಲ್ಲ? ಸಲಹೆ ನೀಡಲಿಲ್ಲ.
ಅಂದಿನ ಪ್ರಧಾನಿ ನರಸಿಂಹರಾವ್ ಮೇಲೆ ಒತ್ತಡ ಗೌಡ್ರು ತಂದಿದ್ದರು
ಆ ಹೊತ್ತಿಗೆ ರೈತರು ಮಾಡಿದ್ದ ಸಾಲದ ಮೇಲಿನ ಬಡ್ಡಿ ಹೊರೆ ಹೆಚ್ಚಾಗಿತ್ತು‌. ಈ ಹಿನ್ನೆಯಲ್ಲಿ ದೇವೇಗೌಡರು ಬಡ್ಡಿ ಮನ್ನಾ ಮಾಡುವಂತೆ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಮೇಲೆ ಒತ್ತಡ ತಂದಿದ್ದರು. ಕಡೆಗೆ ದೆಹಲಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು. ದೇವೇಗೌಡರಿಗೆ ಮಣಿದ ಪ್ರಧಾನಿ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದರು. ಆದರೆ ರಾಜ್ಯದ ಹಣಕಾಸು ಸಚಿವರಾಗಿದ್ದ ನೀವು ಈ ಇಡೀ ಬೆಳವಣಿಗೆಯನ್ನು ಮುಗುಂ ಆಗಿ ನೋಡುತ್ತಾ ಕುಳಿತಿದ್ದರೇ ವಿನಾ ರೈತರ ನೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ‌.
ಸಾಲ ಮನ್ನಾ ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಬೌದ್ಧಿಕ ದಿವಾಳಿತನದ್ದು
ಈಗ ನಿಮ್ಮ ಸರ್ಕಾರವೇ ಬಂದ ಮೇಲೂ ಸಾಲ ಮನ್ನಾ ಮಾಡಲಿಲ್ಲ. ಸಾಲ ಮನ್ನಾ ಮಾಡುವುದಾಗಿ ಘೋಷಿಸಿ, ಜಾರಿಗೆ ತರದೇ ವಂಚನೆ ಮಾಡಿದ ನಿಮ್ಮಿಂದ ಜೆಡಿಎಸ್ ಪಕ್ಷ ಸಾಲ ಮನ್ನಾದ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕೆ. ನಿಮ್ಮ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಲ ಮನ್ನಾ ಮಾಡಲಿಲ್ಲವೇಕೆ ಎಂಬ ನಿಮ್ಮ ಪ್ರಶ್ನೆ ಬೌದ್ಧಿಕ ದಿವಾಳಿತನದ್ದು.
ಬಿಜೆಪಿಯವರು ಹಣಕಾಸು ಸಚಿವರಾಗಿದ್ದರು
ನನ್ನ ಅಧಿಕಾರವಧಿಯಲ್ಲಿ ಅದೂ ಸಮ್ಮಿಶ್ರ ಸರ್ಕಾರವಿದ್ದರೂ, ಬಿಜೆಪಿಯವರು ಹಣಕಾಸು ಸಚಿವರಾಗಿದ್ದರೂ, ಎಲ್ಲರನ್ನೂ ಎದುರು ಹಾಕಿಕೊಂಡು ರೈತರ 25ಸಾವಿರ ರೂಪಾಯಿ ವರೆಗಿನ ಎಲ್ಲ ಬ್ಯಾಂಕ್​ಗಳಲ್ಲಿನ ಸಾಲ ಮನ್ನಾ ಮಾಡಿದ್ದೇನೆ. ಹಣ ಪಾವತಿಯೂ ಆಗಿದೆ. ನಿಮ್ಮ ಸರ್ಕಾರದಂತೆ ಕೇವಲ ಘೋಷಣೆಯಾಗಿಯೇ ಉಳಿಯಲ್ಲಿಲ್ಲ ನನ್ನ ಭರವಸೆ. ಕೃಷಿ ಸಾಲ ಮನ್ನಾದ ವಿಚಾರದಲ್ಲಿ ನಾಡಿನ ರೈತರು ಕುಮಾರಸ್ವಾಮಿ ಮೇಲೆ ವಿಶ್ವಾಸ ಇಡುತ್ತಾರೋ ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿಡುತ್ತಾರೋ ಎಂಬುದನ್ನು ಈ ಚುನಾವಣೆ ನಿರ್ಧಾರ ಮಾಡಲಿದೆ.
ಮಕ್ಕಳನ್ನು ಮುಖ್ಯಮಂತ್ರಿ ಮಾಡಲೆಂದೇ ನನ್ನನ್ನು ಹೊರ ಹಾಕಲಾಯಿತು
ಜೆಡಿಎಸ್ ಪಕ್ಷದಲ್ಲಿದ್ದಿದ್ದರೆ ನಾನು ಮುಖ್ಯಮಂತ್ರಿ ಆಗಿರುತ್ತಿದ್ದೆ. ಕುಮಾರಸ್ವಾಮಿಗೆ ಅಧಿಕಾರ ಸಿಗುತ್ತಿರಲಿಲ್ಲ‌. ಮಕ್ಕಳನ್ನು ಮುಖ್ಯಮಂತ್ರಿ ಮಾಡಲೆಂದೇ ನನ್ನನ್ನು ಹೊರ ಹಾಕಲಾಯಿತು ಎಂಬುದು ನಿಮ್ಮ ಆರೋಪ. ನೀವು ಕಡೆಗೂ ಸತ್ಯ ಒಪ್ಪಿಕೊಂಡಿದ್ದೀರಿ. ಈ ಮಾತಿನೊಂದಿಗೆ "ದೇವೇಗೌಡರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ವಂಚಿಸಿದರು" ಎಂಬ ನಿಮ್ಮ ಆರೋಪವನ್ನು ಸ್ವತಃ ನೀವೇ ಸುಳ್ಳು ಎಂದು ಸಾರಿ ಹೇಳಿದ್ದೀರಿ. ಜೆಡಿಎಸ್ ಪಕ್ಷದಲ್ಲಿ ನಿಮಗೆ ಮುಖ್ಯಮಂತ್ರಿಯಾಗುವ ಅವಕಾಶಗಳೆಲ್ಲವೂ ಇದ್ದವು. ಅಂಥ ಮಾನ್ಯತೆಯನ್ನು ದೇವೇಗೌಡರೂ ಕೊಟ್ಟಿದ್ದರು ಎಂಬುದನ್ನು ನೀವೇ ಒಪ್ಪಿಕೊಂಡಿದ್ದೀರಿ.
ಸಿದ್ದರಾಮಯ್ಯ ಅವರ ಆತ್ಮವಂಚನೆಯದ್ದೇ ವಿನಾ ಪ್ರಾಮಾಣಿಕವಾದದ್ದಲ್ಲ‌
ಒಂದು ವೇಳೆ ತಾಯಿಯಂಥ ಪಕ್ಷಕ್ಕೆ ನೀವು ದ್ರೋಹ ಬಗೆಯದೇ ಇದ್ದಿದ್ದರೆ ಜೆಡಿಎಸ್ ಮೂಲಕವೇ ಮುಖ್ಯಮಂತ್ರಿ ಆಗಿರುತ್ತಿದ್ದೀರೋ ಏನೋ‌. ಆದರೆ ಪಕ್ಷ ಬಿಟ್ಟು ಹೋಗಿ ದೇವೇಗೌಡರು ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಆರೋಪಿಸಿದ್ದು ಸರಿಯೇ? ಇನ್ನು ನನ್ನ ವಿಚಾರ, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ನನ್ನನ್ನು ಹೊರ ಹಾಕಿದರು ಎಂದು ನೀವು ದೊಡ್ಡ ಗಂಟಲಿನಲ್ಲಿ ಹೇಳಿದ್ದೀರಿ. ಈ ಮಾತು ಅಕ್ಷರಶಃ ನಿಮ್ಮ ಆತ್ಮವಂಚನೆಯದ್ದೇ ವಿನಾ ಪ್ರಾಮಾಣಿಕವಾದದ್ದಲ್ಲ‌.
ದೇವೇಗೌಡರು ನಿಮಗೆ ಮನ್ನಣೆ ನೀಡಿದ್ದರು. ಉಪಮುಖ್ಯಮಂತ್ರಿ ಮಾಡಿದರು.
2004ರ ಹೊತ್ತಿಗೆ ನಾನು ಮೊದಲ ಬಾರಿಯ ಶಾಸಕ, ವಿಧಾನಸಭೆಯ ಕಡೆ ಸೀಟಿನಲ್ಲಿ ಕೂರುತ್ತಿದ್ದ ನನಗಾಗಲಿ ಅಥವಾ ದೇವೇಗೌಡರಿಗಾಗಲಿ ನನ್ನನ್ನು ಮುಖ್ಯಮಂತ್ರಿ ಮಾಡುವ ಕಿಂಚಿತ್ತು ಕಲ್ಪನೆಯೂ ಇರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪುತ್ರ ವ್ಯಾಮೋಹವಿದ್ದಿದ್ದರೆ ನನ್ನ ಸಹೋದರ ರೇವಣ್ಣ ಅವರೇ ಅಂದು ಉಪ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದರೆ ದೇವೇಗೌಡರಿಗೆ ಅಂದು ಶಿಷ್ಯ ಪ್ರೇಮವಿತ್ತು. ಆ ಕಾರಣಕ್ಕೇ ಸಜ್ಜನರೆನಿಸಿಕೊಂಡಿದ್ದ ಎಂಪಿ ಪ್ರಕಾಶ್, ಸಿಂಧ್ಯಾ, ಹೊರಟ್ಟಿ, ರೇವಣ್ಣ ಅವರಂಥವರನ್ನು ಪಕ್ಕಕ್ಕಿಟ್ಟು ದೇವೇಗೌಡರು ನಿಮಗೆ ಮನ್ನಣೆ ನೀಡಿದ್ದರು. ಉಪಮುಖ್ಯಮಂತ್ರಿ ಮಾಡಿದರು‌. ಸಿಎಂ ಮಾಡಲೂ ಹೋರಾಡಿದ್ದರು. ಆದರೆ ಸಿಎಂ ಸ್ಥಾನ ಸಿಗಲಿಲ್ಲ.‌ಅದಕ್ಕೆ ಕಾರಣವೇನೆಂದು ಈಗಿನ ಅವರ ಪಕ್ಷದ ವರಿಷ್ಠರನ್ನೇ ಅವರು ಪ್ರಶ್ನಿಸಿಕೊಳ್ಳಲಿ, ದಂಡಿಸಿಕೊಳ್ಳಲಿ.
ಭಾಷ್ಯ ಬರೆಯಬೇಕಾದವರು ನಾಡಿನ ಜನ. ನಿಮ್ಮ ಕೈಯಲ್ಲಿ ಏನೂ ಇಲ್ಲ
ಜೆಡಿಎಸ್ 25 ಸ್ಥಾನಗಳನ್ನೂ ಗೆಲ್ಲವುದಿಲ್ಲ ಎಂದು ಭವಿಷ್ಯ ನುಡಿದಿದ್ದೀರಿ. ಭಾಷ್ಯ ಬರೆಯಬೇಕಾದವರು ನಾಡಿನ ಜನ. ಸಿದ್ದರಾಮಯ್ಯನವರೇ ನಿಮ್ಮ ಕೈಯಲ್ಲಿ ಏನೂ ಇಲ್ಲ. ನಮ್ಮ ಪಕ್ಷದ ಗೆಲುವಿನ ಬಗ್ಗೆ ಮಾತನಾಡುವ ಮುನ್ನ ಚಾಮುಂಡೇಶ್ವರಿಯಲ್ಲಿ ನಿಮ್ಮ ಗೆಲುವಿನ ಬಗ್ಗೆ ಚಿಂತಿಸಿ. ಇನ್ನು ಜೆಡಿಎಸ್​ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತವೂ ಬಿಜೆಪಿ ಬೆಂಬಲಿಸಿದಂತೆ, ಕೋಮುವಾದವನ್ನು ಬೆಂಬಲಿಸಿದಂತೆ ಎನ್ನುತ್ತೀರಿ. ಜಾತಿ, ಧರ್ಮ, ಸಮುದಾಯಗಳನ್ನು ಒಡೆಯುವುದೇ ನಿಮ್ಮ ಜಾತ್ಯತೀತತೆ. ನಾನು ಆ ಜಾತ್ಯತೀತೆಯಿಂದ ದೂರ ನಿಂತಿದ್ದೇನೆ. ಸರ್ವರ ಒಳಗೊಳ್ಳುವಿಕೆಯಷ್ಟೇ ನನ್ನ ಜಾತ್ಯತೀತತೆ.
ನಿಮ್ಮಂಥ ಡೋಂಗಿ ಜಾತ್ಯತೀತತೆಯನ್ನಂತೂ ನನ್ನ ಬಳಿ ಬಿಟ್ಟುಕೊಂಡಿಲ್ಲ
ಅದಕ್ಕೂ ಮಿಗಿಲಾಗಿ, ಅದಕ್ಕಿಂತ ಕಡಿಮೆ ನನಗ್ಯಾವ ಜಾತ್ಯತೀತೆಯೂ ಗೊತ್ತಿಲ್ಲ. ನಿಮ್ಮಂಥ ಡೋಂಗಿ ಜಾತ್ಯತೀತತೆಯನ್ನಂತೂ ನನ್ನ ಬಳಿ ಬಿಟ್ಟುಕೊಂಡಿಲ್ಲ. ನಮಗೆ ಬೀಳುವ ಪ್ರತಿ ಮತ ಬಿಜೆಪಿಗೆ ಸಿಗುವ ಗೆಲುವಲ್ಲ, ಕಾಂಗ್ರೆಸ್​ನ ಸೋಲು. ಆ ಕಾರಣಕ್ಕಾಗಿಯೇ ನಮಗೆ ಮತ ನೀಡದಂತೆ ಹೋದ ಬಂದಲ್ಲೆಲ್ಲ ನೀವು ನಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದೀರಿ. ಇನ್ನೊಂದು ವಿಚಾರ ಕಾಂಗ್ರೆಸ್​ ಪಕ್ಷಕ್ಕೆ ಹಾಕುವ ಒಂದೊಂದು ಮತವೂ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಬೇಕಾದ ಖರ್ಚಿನ ಹಣವಾಗಿ ಪರಿವರ್ತನೆಯಾಗಲಿದೆ.
ಕಾಂಗ್ರೆಸ್ ರಾಜ್ಯವನ್ನು ದೋಚುವ ಯೋಜನೆ ಹಾಕಿಕೊಂಡಿದೆ
ನಮ್ಮ‌ಜನರ ಮತ ಪಡೆದು ಅಧಿಕಾರಕ್ಕೇರುವ ಕನವರಿಕೆಯಲ್ಲಿರುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಟೀಂ ಮುಂದೆ ಬರಲಿರುವ ಚುನಾವಣೆಗಳಿಗಾಗಿ ರಾಜ್ಯವನ್ನು ದೋಚುವ ಯೋಜನೆ ಹಾಕಿಕೊಂಡಿದೆ. ಒಂದು ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಪಡೆದಿದ್ದೇ ಆದರೆ ರಾಜ್ಯವನ್ನು ಲೂಟಿ ಮಾಡಿ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಹಣ ಹೊಂದಿಸಿಕೊಳ್ಳಲಿದೆ. ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಟಿಎಂ ರೀತಿಯಂತಾಗಲಿದೆ.
ಕಾಂಗ್ರೆಸ್ಸಿಗೆ ಹಾಕುವ ಪ್ರತಿ ಮತವೂ ಲೂಟಿಕೋರರಿಗೆ ನೀಡಿದ ಪ್ರೋತ್ಸಾಹ
ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಹಾಕುವ ಪ್ರತಿ ಮತವೂ ಲೂಟಿಕೋರರಿಗೆ ನೀಡಿದ ಪ್ರೋತ್ಸಾಹವಾಗಲಿದೆ. ಉತ್ತರ ಕರ್ನಾಟಕದಲ್ಲಿ ಬಸವಣ್ಣ ಎನ್ನುವ ನೀವು ಹಳೇ ಮೈಸೂರಲ್ಲಿ ಕೆಂಪೇಗೌಡ ಎನ್ನುತ್ತೀರಿ. ಆ ಇಬ್ಬರೂ ಮಹನೀಯರು ಕಾಲ, ದೇಶ, ಪ್ರಾಂತ್ಯವನ್ನು ಮೀರಿದ ವಿಶ್ವ ಮಾನವರು ಎಂಬದನ್ನು ಮರೆತು ಮತಕ್ಕಾಗಿ ಅವರ ಭಜನೆ ಮಾಡುತ್ತೀರಿ.‌ ಹೀಗಿರುವ ನಿಮ್ಮಂಥವರಿಂದ ಜಾತ್ಯತೀತತೆ, ಬದ್ಧತೆಯನ್ನು ಹೇಳಿಸಿಕೊಳ್ಳುವ ಅಗತ್ಯ ನಮಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com