ಕರ್ನಾಟಕದ ತೆಲುಗು ಪ್ರಜೆಗಳು ಮೋದಿ ಪಕ್ಷಕ್ಕೆ ಮತಹಾಕಬಾರದು: ಆಂಧ್ರ ಡಿಸಿಎಂ ಕೆಇ ಕೃಷ್ಣಮೂರ್ತಿ

ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದಾನ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಕೆ ಇ ಕೃಷ್ಣ ಮೂರ್ತಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಇ ಕೃಷ್ಣಮೂರ್ತಿ
ಸುದ್ದಿಗೋಷ್ಠಿಯಲ್ಲಿ ಕೆಇ ಕೃಷ್ಣಮೂರ್ತಿ
ಅಮರಾವತಿ: ಕರ್ನಾಟಕದಲ್ಲಿರುವ ತೆಲುಗು ಪ್ರಜೆಗಳು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರ ಪ್ರದೇಶಕ್ಕೆ ಮಾಡಿರುವ ಮೋಸವನ್ನು ಮರೆಯಬಾರದು. ಅಂತೆಯೇ ಹಾಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತದಾನ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಕೆ ಇ ಕೃಷ್ಣ ಮೂರ್ತಿ ಹೇಳಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡುವ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದವರೆಸಿರುವ ಟಿಡಿಪಿ ನಾಯಕರು ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ತಮ್ಮ ಅಸಮಾಧಾನದ ದಾಳವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಕೆಇ ಕೃಷ್ಣಮೂರ್ತಿ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಏರತೊಡಗಿದ್ದು, ಮೋದಿ ಪಕ್ಷಕ್ಕೆ ಮತ ಹಾಕಬೇಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ.
ಧಾರ್ಮಿಕ ಕಾರ್ಯನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ  ಆಂಧ್ರ ಉಪ ಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಯವರು ಮೋದಿ ವಿರುದ್ಧ ಮಾತನಾಡಿ, ಮೋದಿ ಪಕ್ಷವಾದ ಬಿಜೆಪಿಗೆ ಮತ ನೀಡಬೇಡಿ ಎಂದು ಕರ್ನಾಟಕದಲ್ಲಿ ನೆಲೆಸಿರುವ ತೆಲುಗು ಪ್ರಜೆಗಳಿಗೆ ಕರೆ ನೀಡಿದ್ದಾರೆ. 'ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ನಿರ್ಮಾಣ ಫಂಡ್, ಕಡಪ ಸ್ಟೀಲ್ ಬ್ರಿಡ್ಜ್, ವೈಜಾಕ್ ರೈಲ್ವೇ ಜೋನ್ ಯೋಜನೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೆರವೇರಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ತಿಳಿಸಿದ್ದರು. ಆದರೆ ಅವರು ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ' ಎಂದು ವಾಗ್ದಾಳಿ ನಡೆಸಿದರು.
ಅಂತೆಯೇ ಯಾವುದೇ ಭರವಸೆಯನ್ನು ಈಡೇರಿಸದ ಕಾರಣ ಬಿಜೆಪಿ ಜೊತೆ ಸಮಿಶ್ರ ಮಾಡಿಕೊಂಡಿದ್ದ ತೆಲುಗು ದೇಶಂ ಪಾರ್ಟಿ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದೆ. ಬಿಜೆಪಿ ಪಕ್ಷವನ್ನು ನಂಬಿ ತಾವು ಮೋಸ ಹೋದಂತೆ ಮತ್ತೆ ಯಾರೂ ಮೋಸ ಹೋಗಬಾರದೆಂದು ಹರಿಹಾಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com