'ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಿಲ್ಲ', ಕಣದಿಂದ ಹಿಂದೆ ಸರಿದ ರೆಬೆಲ್ ಸ್ಟಾರ್ ಅಂಬರೀಶ್

ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೊಂದಲಕ್ಕೆ ಕೊನೆಗೂ ರೆಬೆಲ್ ಸ್ಟಾರ್ ಅಂಬರೀಶ್ ತೆರೆ ಎಳೆದಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೊಂದಲಕ್ಕೆ ಕೊನೆಗೂ ರೆಬೆಲ್ ಸ್ಟಾರ್ ಅಂಬರೀಶ್ ತೆರೆ ಎಳೆದಿದ್ದು, ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಂಬರೀಶ್ ಅವರು, ಹಾಲಿ ಚುನಾವಣೆಯಲ್ಲಿ ನಾನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತಿಲ್ಲ. ಅನಾರೋಗ್ಯದ ಕಾರಣದಿಂದಾಗಿ ನಾನು ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ವಯಸ್ಸಾಯ್ತು, ಶಕ್ತಿ ಕುಂದುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಟ ಅಂಬರೀಶ್ ಹೇಳಿದರು.
'ಈಗ ನನಗೆ 66 ವರ್ಷ ಮತ್ತೆ ಐದು ವರ್ಷ ಎಂದರೆ 71 ವರ್ಷವಾಗುತ್ತದೆ. ಆ ವಯಸ್ಸಿನಲ್ಲಿ ರಾಜಕೀಯ ಮಾಡಲು ನನ್ನಿಂದ ಸಾದ್ಯವಿಲ್ಲ. ಎಲ್ಲರೂ ದೇವೇಗೌಡರಾಗಲೂ ಸಾಧ್ಯವಿಲ್ಲ ಎಂದು ಹೇಳಿದರು. ಇದೇ  ವೇಳೆ ತಮ್ಮ ಬದಲಾಗಿ ಬೇರೆ ಅಭ್ಯರ್ಥಿಯನ್ನು ಸೂಚಿಸಬಹುದಿತ್ತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಂಬಿ, ನಾನು ಅಭ್ಯರ್ಥಿಯನ್ನು ಸೂಚಿಸಿದರೆ ಆತನ ಪ್ರಚಾರಕ್ಕಾಗಿ ನಾನು ಹೋಗಬೇಕು. ಪ್ರಚಾರಕ್ಕೆ ಹೋಗಬಹುದಾಗಿದ್ದರೆ ನಾನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೆ. ಅದು ಸಾಧ್ಯವಿಲ್ಲ ಎಂದೇ ನಾನು ಮನೆಯಲ್ಲಿ ಕುಳಿತಿದ್ದೇನೆ. ಹೀಗಾಗಿ ಬೇರೆ ಯಾರನ್ನೂ ಅಭ್ಯರ್ಥಿಯಾಗಿ ಸೂಚಿಸಿಲ್ಲ. ಆದರೆ ಪಕ್ಷ ಯಾರನ್ನೇ ಅಭ್ಯರ್ಥಿಯಾಗಿಸಿದರೂ ಅವರಿಗೆ ನನ್ನ ಬೆಂಬಲ ವಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡುರಾವ್ ಹೇಳಿಕೆಯಿಂದ ಕೊಂಚ ನೋವಾಗಿದೆ ಎಂದು ಅಂಬರೀಶ್ ಹೇಳಿದ್ದಾರೆ. ಆದರೆ ಅವರಿಂದಲೇ ನಾನು ಚುನಾವಣಾ ಕಣದಿಂದ ಹಿಂದೆ ಸರಿದಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ನನ್ನ ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ನಾನು ಚುನಾವಣೆ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಮಂಡ್ಯದಲ್ಲಿ ನಾನಿಲ್ಲ ಎಂದರೆ ಮತ್ತೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ. ಎಲ್ಲವವ್ನೂ ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದೇನೆ ಎಂದು ಅಂಬರೀಶ್ ಹೇಳಿದ್ದಾರೆ.
ಸಿಎಂ ಬಾದಾಮಿಗೆ ಹೋಗಿದ್ದು ಸರಿಯಿಲ್ಲ
ಇನ್ನು ಇದೇ ವೇಳೆ ಚಾಮುಂಡೇಶ್ವರಿ ಅಲ್ಲದೇ ಬಾದಾಮಿಯಲ್ಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿರುವುದು ಸರಿಯಲ್ಲ ಎಂದು ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ನನ್ನದೇ.. ಈ ಕ್ಷೇತ್ರ ನನ್ನ ತವರು ಎಂದು ಹೇಳುತ್ತಿದ್ದ ಸಿಎಂ ಸ್ವಕ್ಷೇತ್ರ ಬಿಡಬಾರದಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com