ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಆರೋಪ ಮಾಡಿದ್ದಾರೆ...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಆರೋಪ ಮಾಡಿದ್ದಾರೆ. 
ಹನುಮಂತ ನಗರದಲ್ಲಿನ ಪಿಇಎಸ್ ಕ್ಯಾಂಪಸ್ ನಲ್ಲಿ ಭಾನುವಾರ ಪ್ರಾಜ್ಞಾವರ್ಗವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಕ್ರಿಮಿನಲ್ ಗಳ ವಿರುದ್ಧ ಕ್ರಮ ಕೈಗೊಳ್ಳದೆ ಕಾಂಗ್ರೆಸ್ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದ ಜನರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ವಿದ್ಯಾವಂತ ಮಧ್ಯಮವರ್ಗದ ಜನರು ಚುನಾವಣೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಆದರೆ, ಇನ್ನು ಮುಂದೆ ಹಾಗಾಗುವುದಿಲ್ಲ ಎಂದು ಹೇಳಿದ್ದಾರೆ. 
2014 ಲೋಕಸಭಾ ಚುನಾವಣೆ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಚುನಾವಣೆಯಲ್ಲಿ ಪಾಲ್ಗೊಳ್ಳಲು ಜನರು ಉತ್ಸುಕರಾಗಿದ್ದಾರೆ. ಚುನಾವಣೆಯಲ್ಲಿ ಜನರ ಪಾತ್ರ ಅತ್ಯಂತ ಪ್ರಮುಖವಾದದ್ದು. ಬೆಂಗಳೂರು ಅತ್ಯಂತ ಉತ್ತಮ ನಗರ. ಆದರೆ, ತ್ಯಾಜ್ಯ ನಿರ್ವಹಣೆ, ಕೆರೆಗಳ ಮಾಲಿನ್ಯ, ಕೆಟ್ಟ ಸಂಚಾರ ವ್ಯವಸ್ಥೆ ನಿರ್ವಹಣೆ ಮತ್ತು ಮೂಲಸೌಕರ್ಯ ಕೊರತೆಗೆ ಬೆಂಗಳೂರು ಸೂಕ್ತ ಉದಾಹರಣೆಯಂತಾಗಿದೆ. 
ಪ್ರತೀಯೊಂದಕ್ಕೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನೇ ದೂಷಿಸುತ್ತದೆ. ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ಕೈಗಾರಿಕಾ ವಲಯದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದರೂ, ರಾಜ್ಯ ಸರ್ಕಾರ ನಿರ್ಲಕ್ಷ್ಯದಿಂದಾಗಿ ತೀವ್ರಗತಿಯ ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಕರ್ನಾಟಕ ವಿಫಲವಾಗಿದೆ. ಇದಕ್ಕೆ ಸಿದ್ದರಾಮಯ್ಯ ಸರ್ಕಾರ ಕೆಟ್ಟ ಆಡಳಿತ ಮತ್ತು ಆಡಳಿತದ ಲೋಪವೇ ಕಾರಣ ಎಂದು ಕಿಡಿಕಾರಿದ್ದಾರೆ. 
ಸೂಕ್ತ ನಗರ ಯೋಜನೆಯೊಂದಿಗೆ ನಗರೀಕರಣದ ಬಗ್ಗೆ ಕೇಂದ್ರ ಸರ್ಕಾರ ಉತ್ಸುಕವಾಗಿದ್ದರೂ, ರಾಜ್ಯ ಸರ್ಕಾರ ತಪ್ಪು ಆದ್ಯತೆಯ ನೀತಿಗಳಿಂದಾಗಿ ರಾಜ್ಯ ಮೂಲಸೌಕರ್ಯದ ತೀವ್ರ ಕೊರತೆ ಎದುರಿಸುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಆಯ್ಕೆಯಾಗಿರುವ ಹಿನ್ನಲೆಯಲ್ಲಿ ನಗರದ ಬೆಳವಣಿಗೆಯನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸುವುದು ಅತ್ಯಗತ್ಯ. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕಠಿಣ ಮತ್ತು ತ್ವರಿತ ನಿರ್ಣಯಗಳನ್ನು ರಾಜ್ಯ ಸರ್ಕಾರ ಪಾಲಿಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ. 
ಇದೇ ವೇಳೆ ಮೊಹಮ್ಮದ್ ನಲಪ್ರಾಡ್ ಪ್ರಕರಣದ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಧಿಕಾರದಲ್ಲಿರುವ ಜನರು ಕಣ್ಣುಮುಚ್ಚಿ ಕುಳಿತಿದ್ದಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಜನರನ್ನು ವಿಭಜಿಸುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com