ಸೆಪ್ಟೆಂಬರ್ ಮೂರನೇ ವಾರದಲ್ಲಿ ಸಂಪುಟ ವಿಸ್ತರಣೆ: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ

ಸೆಪ್ಟೆಂಬರ್ ಮೂರನೇ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಸೆಪ್ಟೆಂಬರ್ ಮೂರನೇ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ನೂರು ದಿನಗಳನ್ನು ಪೂರೈಸಿದ ಬೆನ್ನಲ್ಲೇ ಇಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದಿನ ಸಭೆ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ ನೇಮಕಕ್ಕೆ ಸಮನ್ವಯ ಸಮಿತಿ ಅಸ್ತು ಎಂದಿದ್ದು, ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ವಾಪಸ್ ಆದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ. ಇನ್ನು ಅನ್ನಭಾಗ್ಯ ಯೊಜನೆಯ ಅಕ್ಕಿ ಪ್ರಮಾಣ ಕಡಿತದ ಕುರಿತು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಅಕ್ಕಿ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ ಅವರು ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರಮಾಣ ಕಡಿತ ಮಾಡಿದರೆ ಬೊಕ್ಕಸಕ್ಕೆ 2 ಸಾವಿರ ಕೋಟಿ ಹಣ ಉಳಿತಾಯವಾಗುತ್ತದೆ ಎಂದು ಹೇಳಿದರು. ಆದರೆ ಸಿಎಂ ವಾದಕ್ಕೆ ಮಣಿಯದ ಸಿದ್ದರಾಮಯ್ಯ ಅವರು, ಈ ಬಗ್ಗೆ ಗೊಂದಲ ಸೃಷ್ಟಿ ಬೇಡ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಜೊತೆಗೆ ಏಕ ಕಾಲದಲ್ಲೇ ನಿಗಮ ಮತ್ತು ಮಂಡಳಿ ಅಧ್ಯಕ್ಷರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರ ಕುರಿತು ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಏಕಾಏಕಿ ಅಧಿಕಾರಿಗಳ ವರ್ಗಾವಣೆ ನಿರ್ಧಾರ ಸರಿಯಲ್ಲ. ಸಂಬಂಧಪಟ್ಟ ಇಲಾಖಾ ಸಚಿವರ ಗಮನಕ್ಕೆ ತರುವುದು ಒಳ್ಳೆಯದು. ಇಲ್ಲದಿದ್ದರೆ ಗೊಂದಲಗಳಿಗೆ ಎಡೆಮಾಡಿಕೊಟ್ಟಂತಾಗುತ್ತೆ ಅಂತಾ ತಿಳಿಸಿದ ಅವರು ಈಗಾಗಲೇ ಈ ವಿಚಾರವಾಗಿ ಕೆಲ ಸಚಿವರಲ್ಲಿ ಬೇಸರ ಮೂಡಿಸಿದೆ. ಹಾಗಾಗಿ ಚರ್ಚಿಸಿ ವರ್ಗಾವಣೆ ಮಾಡಿ ಅಂತಾನೂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ ಮೂರನೇ ವಾರದಲ್ಲಿ ರಾಜ್ಯ ಸಂಪುಟ ಸಭೆ ವಿಸ್ತರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಂತೆಯೇ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಸಾಮಾನ್ಯ ಕನಿಷ್ಠ ಯೋಜನೆ ಮುಂದುವರೆಕೆಗೂ ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಂತೆಯೇ ನಾವೆಲ್ಲರೂ ಒಂದೇ ಎಂದು ಹೇಳಿದ ಸಿದ್ದರಾಮಯ್ಯ ಅವರು, ಸರ್ಕಾರ ಉತ್ತಮ ದಿಕ್ಕಿನಲ್ಲಿ ಸಾಗಿದೆ. ಈ ಬಗ್ಗೆ ಬಿಜೆಪಿ ಚಿಂತಿಸುವ ಅಗತ್ಯವಿಲ್ಲ. ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಗಳ ಈಡೇರಿಕೆ ಕುರಿತು ಬಿಜೆಪಿ ಚಿಂತಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com