ಸಂತೋಷ್ ಮನೆಗೆ ಭೇಟಿ ನೀಡಿದ ಬಿಎಸ್ ವೈ
ರಾಜಕೀಯ
ಹತ್ಯೆಗೀಡಾದ ಸಂತೋಷ್ ಮನೆಗೆ ಬಿಎಸ್ ವೈ ಭೇಟಿ, 1 ಲಕ್ಷ ರೂ ಪರಿಹಾರ
ಜನವರಿ 31ರಂದು ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಈ ವೇಳೆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದರು.
ಬೆಂಗಳೂರು: ಜನವರಿ 31ರಂದು ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಈ ವೇಳೆ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದರು.
ಇಂದು ಬೆಳಗ್ಗೆ ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ನಲ್ಲಿರುವ ಸಂತೋಷ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಿಎಸ್ ಯಡಿಯೂರಪ್ಪ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಇದೇ ವೇಳೆ ಸಂತೋಷ್ ಅವರ ತಾಯಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಿದರು. ಈ ವೇಳೆ ಯಡಿಯೂರಪ್ಪ ಅವರನ್ನು ಕಂಡು ಭಾವುಕರಾದ ಸಂತೋಷ್ ಅವರ ತಾಯಿ. ತನ್ನ ಮಗನ ಸಾವಿನ ಬಗ್ಗೆ ನ್ಯಾಯ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ "ಈ ಏರಿಯಾದಲ್ಲಿ ಗಾಂಜಾ ಹುಡುಗರ ಕಾಟ ಹೆಚ್ಚಾಗಿದ್ದು, ಹೆಣ್ಣು ಮಕ್ಕಳಿಗೂ ಇಲ್ಲಿ ತೊಂದರೆಯಾಗುತ್ತಿದೆ. ಅವರಿಂದಾಗಿಯೇ ಇಂದು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ ಎಂದು ಬಿಎಸ್ವೈ ಎದುರು ಸಂತೋಷ್ ತಾಯಿ ಅಳಲು ತೋಡಿಕೊಂಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ ವೈ, "ರಾಜಕೀಯ ಲಾಭಕ್ಕಾಗಿ ಈ ರೀತಿ ಕೊಲೆಗಳಾಗುತ್ತಿದ್ದು, ಈ ಹಿಂದೆ ದೀಪಕ್ ರಾವ್ ಹತ್ಯೆಯಾಯ್ತು, ಈಗ ಸಂತೋಷ್ ಹತ್ಯೆಯಾಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೇಜವಾಬ್ದಾರಿತನ ಇದೆ. ಇಂತಹ ಅಮಾನುಷ ಕೃತ್ಯವನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಸರ್ಕಾರ ಸ್ವಾರ್ಥಕ್ಕಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದು, ಸಿದ್ದರಾಮಯ್ಯನವರಿಗೆ ಸೌಜನ್ಯ ಕನಿಕರ ಇಲ್ಲ. ಸಿಎಂ ಆಗಿ ಅವರು ಬೇಜವಬ್ದಾರಿ ತೋರುತ್ತಿದ್ದಾರೆ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಂತೋಷ್ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಮತ್ತೊಂದೆಡೆ ಸಂತೋಷ್ ಹತ್ಯೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದ್ದು, ಬಗ್ಗೆ ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬಿಜೆಪಿ ಮುಖಂಡರಾದ, ಸಂಸದೆ ಶೋಭಾ ಕರಂದ್ಲಾಜೆ, ಆರ್ ಅಶೋಕ್ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಧಾನಿ ಮೋದಿ ಆಗಮನ ಹಿನ್ನಲೆ ಸಿದ್ಧತೆ ಪರಿಶೀಲಿಸಿದ ಬಿಎಸ್ ವೈ
ಫೆಬ್ರವರಿ 4ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗವಿಸುತ್ತಿರುವ ಹಿನ್ನೆಲೆ ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ಮಾಡಿದರು. ನಗರದ ಅರಮನೆ ಮೈದಾನದಲ್ಲಿ ಕೈಗೊಂಡಿರುವ ಸಿದ್ಧತೆಯ ವೇದಿಕೆ ನಿರ್ಮಾಣ ಬಗ್ಗೆ ಕಾಮಗಾರಿಯನ್ನು ಯಡಿಯೂರಪ್ಪ ಪರಿಶೀಲಿಸಿದರು. ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಥ್ ನೀಡಿದರು. ಪ್ರಧಾನಿ ಆಗಮನ ದಿನವೇ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರು ಬಂದ್ಗೆ ಕರೆ ನೀಡಿದ್ದಾರೆ. ಏತನ್ಮಧ್ಯೆ ರಾಜ್ಯ ಬಿಜೆಪಿ ಸಮಾವೇಶ ನಡೆಸಿಯೇ ಸಿದ್ಧ ಎಂದು ಜಿದ್ದಿಗೆ ಬಿದ್ದದಂತೆ ತಯಾರಿ ನಡೆಸುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ