ನೀವೂ ಬೇಡ.. ನಿಮ್ಮ ಸಹವಾಸವೂ ಬೇಡ: ಜೆಡಿಎಸ್ ವಿರುದ್ಧ ವೈಎಸ್ ವಿ ದತ್ತಾ ಆಕ್ರೋಶ?

ಜೆಡಿಎಸ್ ನ ಹಿರಿಯ ಮುಖಂಡ ವೈಎಸ್ ವಿ ದತ್ತಾ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಜೆಡಿಎಸ್ ನ ಹಿರಿಯ ಮುಖಂಡ ವೈಎಸ್ ವಿ ದತ್ತಾ ತಮ್ಮದೇ ಪಕ್ಷದ ಮುಖಂಡರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಹೌದು..ಮಾಧ್ಯಮ ವರದಿಯಂತೆ ಜೆಡಿಎಸ್ ಪಕ್ಷದ ನಿಷ್ಠಾವಂತ ಮುಖಂಡ ಹಾಗೂ ಜೆಡಿಎಸ್ ವರಿಷ್ಛಾ ಎಚ್ ಡಿ ದೇವೇಗೌಡ ಅವರ ಮಾನಸಪುತ್ರ ಎಂದೇ ಕರೆಯಲಾಗುತ್ತಿದ್ದ ಕಡೂರು ಕ್ಷೇತ್ರ ಮಾಜಿ ಶಾಸಕ ವೈಎಸ್ ವಿ ದತ್ತಾ ಜೆಡಿಎಸ್ ಪಕ್ಷದ ಇತ್ತೀಚೆಗಿನ ಬೆಳವಣಿಗೆಗಳಿಂದ ತೀವ್ರ ಬೇಸರಗೊಂಡಿದ್ದಾರೆ. ಈ ಬಗ್ಗೆ ನೇರವಾಗಿ ಎಚ್ ಡಿ ದೇವೇಗೌಡರ ಬಳಿ ದತ್ತಾ ತಮ್ಮ ಅಸಮಾಧಾನ ಹೊರ ಹಾಕಿದ್ದು, ಇನ್ನು ಮುಂದೆ ನೀವೂ ಬೇಡ.. ನಿಮ್ಮ ಪಕ್ಷವೂ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಂಗಳೂರಿನಲ್ಲಿ ದೇವೇಗೌಡ ಅವರನ್ನು ಭೇಟಿಯಾಗಿದ್ದ ವೈಎಸ್ ವಿ ದತ್ತಾ ಅವರು, ನಾನು ರಾಮಕೃಷ್ಣ ಹೆಗಡೆ ಕಾಲದಿಂದಲೂ ನಿಮ್ಮ ಜತೆಗೆ ಇದ್ದವನು, ಅಂದು ನಾನು ಹೆಗಡೆಯವರ ಜತೆ ಹೋಗದೆ ನಿಮ್ಮ ಬೆನ್ನಿಗೆ ನಿಂತಿದ್ದೆ. ಆದರೆ ಈಗ ನನ್ನನ್ನೇ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೀರಿ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಸೋಲಿಗೆ ಕಾರಣರಾದ ಧರ್ಮೇಗೌಡರಿಗೆ ವಿಧಾನಪರಿಷತ್ ಟಿಕೆಟ್ ಕೊಟ್ಟಿದ್ದೀರಿ. ಇದು ನೀವು ಮತ್ತು ರೇವಣ್ಣ ಮಾಡಿರುವ ಉಪಕಾರ. ಇನ್ಮೇಲೆ ನೀವು ಬೇಡ, ನಿಮ್ಮ ಪಕ್ಷವೂ ಬೇಡ. ನಿಮ್ಮನ್ನು ನಂಬಿ ಬಂದಿದ್ದಕ್ಕೆ ನನಗೆ ನೀವು ಮಾಡಿದ ಉಪಕಾರ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಏತನ್ಮಧ್ಯೆ ದೇವೇಗೌಡರು ಕೂಡ ಅಸಹಾಯಕತೆ ವ್ಯಕ್ತಪಡಿಸಿ ನಾನು ಕೂಡಾ ಧರ್ಮೇಗೌಡರಿಗೆ ಟಿಕೆಟ್ ಕೊಡೋದು ಬೇಡ ಎಂದು ನಾನು ಹೇಳಿದ್ದೆ, ಆದರೆ ಅಷ್ಟರಲ್ಲಾಗಲೇ ಜೆಡಿಎಸ್ ನಿಂದ ಟಿಕೆಟ್ ಹಂಚಿಕೆ ಮಾಡಿ ಆಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆಂದು ವರದಿಯಲ್ಲಿ ವಿವರಿಸಲಾಗಿದೆ.
ಆದರೆ ಈ ಬಗ್ಗೆ ವೈಎಸ್ ವಿ ದತ್ತಾ ಮಾತ್ರ ಈ ವರೆಗೂ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com