ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುತ್ತದೆಂಬ ಭಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳು ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳು ಭಯದಿಂದಾಗಿ ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡಿ ಸುಖಾ ಸುಮ್ಮನೇ ಟೀಕಿಸುತ್ತಿವೆ ಎಂದು ಕುಮಾರ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಪಕ್ಷದ ಸಾಮರ್ಥ್ಯವನ್ನು ಅರಿತಿದ್ದಾರೆ ಎಂದು ಹೇಳಿರುವ ಕುಮಾರ ಸ್ವಾಮಿ, ಹೀಗಾಗಿ ಮೋದಿಯವರು ಸ್ಥಳೀಯ ಪಕ್ಷಗಳ ಮೇಲೆ ಸಹಾನುಭೂತಿ ತೋರಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಗುರಿಯಾಗಿರಿಸಿಕೊಂಡು ಟೀಕೆ ಮಾಡುತ್ತಿರುವುದನ್ನು ಗಮನಿಸಿದರೆ ಒಂದು ಅಂಶವಂತೂ ಸ್ಪಷ್ಟವಾಗುತ್ತಿದೆ. ಎರಡೂ ಪಕ್ಷಗಳಿಗೆ ನಮ್ಮ ಬಗ್ಗೆ ಭಯ ಹುಟ್ಟಿದೆ. ನಾವು ಅಧಿಕಾರಕ್ಕೆ ಬರುವ ಭಯ ಅವರಿಗೆ ದುಸ್ವಪ್ನವಾಗಿ ಕಾಡುತ್ತಿದೆ. ನಮ್ಮ ಪಕ್ಷ ಯಾರ ಟೀಕೆಗೂ ಹೆದರುವುದಿಲ್ಲ, ಯಾರ ಹೊಗಳಿಕೆಗೂ ಹಿಗ್ಗುವುದಿಲ್ಲ.