ವಿಶ್ವಾಸ ಮತ ಯಾಚನೆ: ಬಿಜೆಪಿ ಮಣಿಸಲು ಕಾಂಗ್ರೆಸ್‌–ಜೆಡಿಎಸ್‌ ಮುಂದಿರುವ ಪರ್ಯಾಯವೇನು?

ಸರ್ಕಾರ ರಚನೆ ಕುರಿತ ರಾಜಕೀಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಇಡೀ ದೇಶದ ಗಮನ ಈಗ ಕರ್ನಾಟಕದತ್ತ ನೆಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಸರ್ಕಾರ ರಚನೆ ಕುರಿತ ರಾಜಕೀಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಇಡೀ ದೇಶದ ಗಮನ ಈಗ ಕರ್ನಾಟಕದತ್ತ ನೆಟ್ಟಿದೆ.
ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ ಆಹ್ವಾನಿಸಿದ ಬಳಿಕ ನಡೆದ ರಾಜ್ಯ ರಾಜಕೀಯದ ಸಂಚಲನ ಈಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶನಿವಾರ ಸಂಜೆ 4 ಗಂಟೆಗೆ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ಯಡಿಯೂರಪ್ಪ ಬಹುಮತ ಸಾಬೀತುಪಡಿಸುವರೇ, ಇಲ್ಲವೇ ಎಂಬುದನ್ನು ಕಾದುನೋಡಬೇಕಿದ್ದು, ಅತ್ತ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದ್ದರೆ, ಇತ್ತ ಬಿಜೆಪಿ ಸರ್ಕಾರವನ್ನು ಉರುಳಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಬಿಜೆಪಿ ತಂತ್ರಗಾರಿಕೆಗಳನ್ನು ವಿಫಲಗೊಳಿಸಲು ಯೋಜನೆ ರೂಪಿಸಿವೆ.
221 ಸದಸ್ಯ ಬಲದ ಪೈಕಿ ಬಹುಮತ ಸಾಬೀತಿಗೆ 112 ಸ್ಥಾನಗಳು ಬೇಕು. ಬಿಜೆಪಿ 104 ಸ್ಥಾನ ಹೊಂದಿದ್ದರೂ ತಾವು ಶನಿವಾರ ಬಹುಮತ ಸಾಬೀತುಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ದನಿಗೂಡಿಸುತ್ತಿದೆ. ಆದರೆ, ನಮ್ಮ ಬಳಿ 116 ಶಾಸಕರಿದ್ದು, ವಿಶ್ವಾಸಮತ ನಿರ್ಣಯಕ್ಕೆ ಸೋಲಾಗುವುದು ಖಚಿತ. ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಹೇಳುತ್ತಿದೆ. 
ಹಾಗಿದ್ದರೆ ಬಿಜೆಪಿಯ ತಂತ್ರಗಾರಿಕೆಗಳನ್ನು ವಿಫಲಗೊಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಿರುವ ಆಯ್ಕೆಗಳೇನು?
1. ವಿಶ್ವಾಸಮತದ ವಿರುದ್ಧವಾಗಿ ಮತ ಹಾಕಿ ಯಡಿಯೂರಪ್ಪ ಅವರನ್ನು ಸೋಲಿಸಬಹುದು. ಆಗ, ಅವರು ರಾಜೀನಾಮೆ ನೀಡಬೇಕಾಗುತ್ತದೆ. ಅಂತೆಯೇ ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದಿರುವ ಕುಮಾರಸ್ವಾಮಿ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕಾಗುತ್ತದೆ.
2. ಯಡಿಯೂರಪ್ಪ ಸೋಲಿಸಲು ಪಣತೊಟ್ಟಿರುವ ಈ ಪಕ್ಷಗಳು ತಮ್ಮ ಶಾಸಕರಿಗೆ ಸರ್ಪಗಾವಲು ಹಾಕಿ ಕಾಯುತ್ತಿವೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕೂಡಲೇ ವಿಪ್ ಜಾರಿ ಮಾಡಬಹುದು. ವಿಪ್ ಉಲ್ಲಂಘನೆ ಮಾಡಿದ್ದೇ ಆದರೆ ಶಾಸಕರ ಅನರ್ಹಗೊಳಿಸಲು ಉಭಯ ಪಕ್ಷಗಳು ಅರ್ಜಿ ಸಲ್ಲಿಸಬಹುದು. ಆದರೆ ವಿಪ್ ಉಲ್ಲಂಘಿಸಿದರೆ ಶಾಸಕತ್ವ ಅನರ್ಹವಾಗುವುದರಿಂದ ಶಾಸಕರು ಆ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸ ಈ ಪಕ್ಷಗಳಲ್ಲಿದೆ.
3. ಅಡ್ಡ ಮತದಾನ ಮಾಡಿದವರನ್ನು ಅನರ್ಹಗೊಳಿಸಲು ಸ್ಪೀಕರ್ ಕ್ರಮ ಕೈಗೊಳ್ಳದೇ ಇದ್ದರೆ, ಎರಡೂ ಪಕ್ಷಗಳು ಕೋರ್ಟ್ ಮೆಟ್ಟಿಲೇರಬಹುದು.
ಇನ್ನು ಸರ್ಕಾರ ರಚಿಸಲು ಮ್ಯಾಜಿಕ್ ಸಂಖ್ಯೆ–111 ಬೇಕಿದ್ದು, ಬಿಜೆಪಿ ಗೆಲುವು ಸಾಧಿಸಬೇಕಾದರೆ ಕಾಂಗ್ರೆಸ್‌- ಜೆಡಿಎಸ್‌ನ 8 ರಿಂದ 10 ಶಾಸಕರು ಅಡ್ಡ ಮತದಾನ ಮಾಡಬೇಕು. ಆಗ ಬಿಜೆಪಿ ಬಲ 112ರಿಂದ 114ಕ್ಕೆ ಏರಲಿದೆ. ಕಾಂಗ್ರೆಸ್‌–ಜೆಡಿಎಸ್‌ನ 14-15 ಸದಸ್ಯರು ಗೈರಾದರೂ ಬಿಜೆಪಿ ಗೆಲುವು ಸಾಧ್ಯ.
ಹೀಗಾಗಿ ಶನಿವಾರ ಸಂಜೆಯ ವೇಳೆ ಏನಾಗುವುದೋ ಎಂಬ ಕುತೂಹಲ ಹೆಚ್ಚಾಗುತ್ತಿದೆ. ಇದಕ್ಕೂ ಮೊದಲು ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಬೇಕಾಗಿದ್ದರಿಂದ ಬಹುಮತ ಸಾಬೀತು ಪಡಿಸಲು ರಾತ್ರಿಯೇ ಆದರೂ ಆಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com