'ಕೈ' ಶಾಸಕ ಬಿಸಿ ಪಾಟಿಲ್ ಗೆ ಗಾಳ ಹಾಕಿ ತಾವೇ ಸಿಕ್ಕಿ ಬಿದ್ದರೇ 'ಸಿಎಂ' ಯಡಿಯೂರಪ್ಪ?

ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದ್ದು, ಇತ್ತ ಕಾಂಗ್ರೆಸ್ ಪಕ್ಷ ತನ್ನ ಶಾಸಕರಿಗೆ ಬಿಜೆಪಿ ನಾಯಕರು ಒಡ್ಡುತ್ತಿರುವ ಆಮಿಷಗಳ ಕುರಿತ ಒಂದೊಂದೇ ಆಡಿಯೋ ಟೇಪ್ ಗಳನ್ನು ಬಿಡುಗಡೆ ಮಾಡುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದ್ದು, ಇತ್ತ ಕಾಂಗ್ರೆಸ್ ಪಕ್ಷ ತನ್ನ ಶಾಸಕರಿಗೆ ಬಿಜೆಪಿ ನಾಯಕರು ಒಡ್ಡುತ್ತಿರುವ ಆಮಿಷಗಳ ಕುರಿತ ಒಂದೊಂದೇ ಆಡಿಯೋ ಟೇಪ್  ಗಳನ್ನು ಬಿಡುಗಡೆ ಮಾಡುತ್ತಿದೆ.
ನಿನ್ನೆಯಷ್ಟೇ ಗಣಿ ಧಣಿ ಜನಾರ್ಧನ ರೆಡ್ಡಿ ಕಾಂಗ್ರೆಸ್ ಶಾಸಕರೊಬ್ಬರಿಗೆ ಆಮಿಷವೊಡ್ಡಿದ ಆರೋಪದ ಕುರಿತ ಆಡಿಯೋ ಟೇಪ್ ಬಯಲಾಗಿತ್ತು. ಇದರ ಬೆನ್ನಲ್ಲೇ ಇಂದು ಬಿಎಸ್ ವೈ ಪುತ್ರ ವಿಜಯೇಂದ್ರ ಹಾಗೂ ಬಿಎಸ್ ವೈ ಆಪ್ತ ಬಿಜೆ ಪುಟ್ಟಸ್ವಾಮಿ ಅವರದ್ದು ಹೇಳಲಾದ ಆಡಿಯೋ ಕೂಡ ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ತೀವ್ರ ಸುದ್ದಿಗೆ ಗ್ರಾಸವಾಗಿದೆ.
ಇದೀಗ ಖುದ್ಧು ಸಿಎಂ ಯಡಿಯೂರಪ್ಪ ಅವರೇ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆಯಾಗಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಕಾಂಗ್ರೆಸ್ ಪಕ್ಷದ ಹಿರೇಕರೂರು ಶಾಸಕ ಬಿಸಿ ಪಾಟೀಲ್ ಅವರಿಗೆ ಯಡಿಯೂರಪ್ಪ ಕರೆ ಮಾಡಿ ತಮ್ಮ ಪರ ನಿಲ್ಲುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 
ಆಪರೇಶನ್ ಕಮಲದ ಭೀತಿಯಿಂದ ಕಾಂಗ್ರೆಸ್ ಶಾಸಕರನ್ನು ಕೊಚ್ಚಿನ್ ಕರೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿತ್ತು. ಆ ಸಮಯದಲ್ಲಿ ಯಡಿಯೂರಪ್ಪ ಬಿ.ಸಿ ಪಾಟೀಲ್ ಜತೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವ ಆಡಿಯೋ ರಿಲೀಸ್ ಆಗಿದೆ.
ಖುದ್ದು ಯಡಿಯೂರಪ್ಪನವರೇ ಮಾತನಾಡಿ, ಬಿಜೆಪಿ ಆಹ್ವಾನಿಸಿದ್ದು ಪಕ್ಷಕ್ಕೆ ಬಂದರೆ ಮಂತ್ರಿ ಮಾಡುವ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಉಳಿದ ಡೀಲ್ ಅನ್ನು ಶ್ರೀರಾಮುಲು ಜತೆ ಮುಗಿಸುವಂತೆಯೂ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಈ ವಿಡಿಯೋ ಸಂಬಂಧವೂ ಕಾಂಗ್ರೆಸ್ ಪಕ್ಷ ಬಿಎಸ್ ವೈ ವಿರುದ್ಧ ದೂರು ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com