'ಮಿಸ್ಸಿಂಗ್ ಶಾಸಕರು' ಕೊನೆಗೂ ಪತ್ತೆ, ಡಿಕೆ ಸಹೋದರರ ಉಪಸ್ಥಿತಿಯಲ್ಲಿ ವಿಧಾನಸೌಧಕ್ಕೆ ಆಗಮನ

ವಿಶ್ವಾಸಮತ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ನಾಪತ್ತೆಯಾಗಿ ಕಾಂಗ್ರೆಸ್ ಪಾಳಯದ ಆತಂಕಕ್ಕೆ ಕಾರಣವಾಗಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಕೊನೆಗೂ ಪತ್ತೆಯಾಗಿದ್ದು, ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಾಸಮತ ಹಿನ್ನಲೆಯಲ್ಲಿ ಬೆಳಗ್ಗೆಯಿಂದ ನಾಪತ್ತೆಯಾಗಿ ಕಾಂಗ್ರೆಸ್ ಪಾಳಯದ ಆತಂಕಕ್ಕೆ ಕಾರಣವಾಗಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಕೊನೆಗೂ ಪತ್ತೆಯಾಗಿದ್ದು, ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಈ ಬಗ್ಗೆ ಸ್ವತಃ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದು, ಬಿಜೆಪಿಯ ಸೋಮಶೇಖರ್ ರೆಡ್ಡಿ ಅವರ ವಶದಲ್ಲಿದ್ದ ಪ್ರತಾಪ್ ಗೌಡ ಪಾಟೀಲ್ ಅವರನ್ನು ಕರೆತರಲಾಗಿದೆ. ಅವರು ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲು ಗೌಡ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಳಿಕ ಕಾಂಗ್ರೆಸ್ ಪರ ಮತ ಹಾಕಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗೋಲ್ಡನ್ ಫಿಂಚ್ ಹೊಟೆಲ್ ನಲ್ಲಿದ್ದ ಪ್ರತಾಪ್ ಗೌಡ ಪಾಟೀಲ್ ರನ್ನು ಪೊಲೀಸ್ ವರಿಷ್ಠಾಧಿಕಾರಿಗಳು ತೆರಳಿ ಭಾರಿ ಪೊಲೀಸ್ ಬಂದೋಬಸ್ತ್ ನಡುವೆ ವಿಧಾನಸೌಧಕ್ಕೆ ಕರೆತಂದಿದ್ದಾರೆ. ಶಾಸಕ ಪ್ರತಾಪ್ ಗೌಡ ಪಾಟೀಲ್ ವಿಧಾನಸೌಧ ಪ್ರವೇಶ ಮಾಡುತ್ತಿದ್ದಂತೆಯೇ ಇತ್ತ ಸಂಸದ ಡಿಕೆ ಸುರೇಶ್ ಅವರು ಪ್ರತಾಪ್ ಗೌಡ ಪಾಟೀಲ್ ರನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಪ್ರತಾಪ್ ಗೌಡ ಪಾಟೀಲ್ ಅವರು ಭೋಜನ ಸವೆದಿದ್ದಾರೆ.
ಇದರ ಬೆನ್ನಲ್ಲೇ ಆನಂದ್ ಸಿಂಗ್ ಅವರೂ ಕೂಡ ಪತ್ತೆಯಾಗಿದ್ದು, ಆನಂದ್ ಸಿಂಗ್ ಅವರನ್ನು ಸ್ವತಃ ಡಿಕೆ ಶಿವಕುಮಾರ್ ಅವರು ವಿಧಾನಸೌಧಕ್ಕೆ ಕರೆತಂದಿದ್ದಾರೆ. ಅಲ್ಲದೆ ವಿಧಾನಸೌಧಕ್ಕೆ ಆಗಮಿಸುವ ಮಾರ್ಗ ಮಧ್ಯೆಯೇ ಆನಂದ್ ಸಿಂಗ್ ಅವರ ಜೇಬಿಗೆ ಪಕ್ಷದ ವಿಪ್ ಚೀಟಿಯನ್ನು ಹಾಕಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com