'ಆಪರೇಷನ್ ಕಮಲ'ಕ್ಕೆ ಸೆಡ್ಡು ಹೊಡೆಯಲು ಡಿಕೆಶಿ-ಎಚ್ ಡಿಕೆ ರಣತಂತ್ರ!

ವಿಶ್ವಾಸ ಮತ ಯಾಚನೆ ಮಾಡದೇ ಬಿಎಸ್ ವೈ ರಾಜಿನಾಮೆ ನೀಡಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಇನ್ನೂ ಆತಂಕ ತಪ್ಪಿಲ್ಲ.. ಮತ್ತೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗುವ ಸಾಧ್ಯತೆ ಇದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ವಿಶ್ವಾಸ ಮತ ಯಾಚನೆ ಮಾಡದೇ ಬಿಎಸ್ ವೈ ರಾಜಿನಾಮೆ ನೀಡಿದ್ದರೂ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಇನ್ನೂ ಆತಂಕ ತಪ್ಪಿಲ್ಲ.. ಮತ್ತೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್ ಮತ್ತು ಭಾವಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಹುದೊಡ್ಡ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಇಂಬು ನೀಡುವಂತೆ ನಿನ್ನೆಯಷ್ಟೇ ಬಿಜೆಪಿ ಶಾಸಕ ಬಿ ಶ್ರೀರಾಮುಲು ಅವರು ಮೈತ್ರಿ ಸರ್ಕಾರವನ್ನು ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದರು. ಅವರು ಪ್ರತಿಪಕ್ಷವಾಗಿ ಮೈತ್ರಿ ಸರ್ಕಾರದ ತಪ್ಪುಗಳನ್ನು ತೋರಿಸುತ್ತೇವೆ ಎಂದು ಹೇಳಿದ್ದರೂ ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಇನ್ನೂ ಆತಂಕ ಕಡಿಮೆಯಾಗಿಲ್ಲ. ಈಗಲ್ಲದೇ ಹೋದರೂ ಮುಂದಿನ ದಿನಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಜಾರಿ ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಇದಕ್ಕೆ 2010 ರಾಜಕೀಯ ಬೆಳವಣಿಗೆಗಳು ಉತ್ತಮ ಉದಾಹರಣೆಯಂತಿದೆ.
ಇದೇ ಕಾರಣಕ್ಕಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರವನ್ನು ಒಡೆಯಲು ಕಾಯುತ್ತಿರುವ ಬಿಜೆಪಿ ತಂತ್ರಕ್ಕೆ ಉಭಯ ನಾಯಕರು ಭಾರೀ ಮಾಸ್ಟರ್​ ಪ್ಲಾನ್​ ನಡೆಸಿದ್ದು, ನಿಯೋಜಿತ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಮತ್ತು ಕನಕಪುರ ಶಾಸಕ ಡಿ.ಕೆ. ಶಿವಕುಮಾರ್​ ಮೈತ್ರಿ ಸರ್ಕಾರವನ್ನು ಸುಭದ್ರಗೊಳಿಸಲು ಬಿಗ್​ ಪ್ಲಾನ್​ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರಕ್ಕೆ ಸ್ಪಷ್ಟ ಬಹುಮತವಿದೆ. ಆದರೆ ನಾವು ಮೈತ್ರಿ ಸರ್ಕಾರ ರಚಿಸಿ ಅಧಿಕಾರ ನಡೆಸಿದಾಗ ಬಿಜೆಪಿ ನಾನಾ ತಂತ್ರವನ್ನು ರೂಪಿಸುತ್ತದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರಲ್ಲಿ 104 ಮಂದಿ ಶಾಸಕರು ಇದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 113 ಶಾಸಕರು ಬೇಕು. ನಮ್ಮ ಮೈತ್ರಿ ಸರ್ಕಾರದಲ್ಲಿ 117 ಶಾಸಕರು ಇದ್ದಾರೆ. ಆದ್ರೆ ಬಿಜೆಪಿ ಕುತಂತ್ರದಿಂದ ನಮ್ಮ ಸರ್ಕಾರವನ್ನು ಒಡೆಯಲು ಪ್ರಯತ್ನ ನಡೆಸುತ್ತಾರೆ. ನಮ್ಮ ಸರ್ಕಾರ ಕುಸಿಯುವ ಮೊದಲು ನಾವು ಸುರಕ್ಷಿತರಾಗಬೇಕೆಂದು ಕಾಂಗ್ರೆಸ್​ ಮುಖಂಡ ಡಿ.ಕೆ ಶಿವಕುಮಾರ್​ ಮತ್ತು ನಿಯೋಜಿತ ಮುಖ್ಯಮಂತ್ರಿ ಬಿಜೆಪಿಗೆ ಪ್ರತಿತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಡಿಕೆಶಿ ಮಾಸ್ಟರ್ ಪ್ಲಾನ್ ಏನು?
ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕೆಲವೇ ಸಚಿವ ಸ್ಥಾನ ಭರ್ತಿ ಮಾಡಿ, ಬಾಕಿಯಿರುವುದನ್ನು ಹಾಗೆಯೇ ಉಳಿಸಿಕೊಳ್ಳಲು ಯೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಮುಂದಿನ ಎರಡು-ಮೂರು ತಿಂಗಳಲ್ಲಿ ಕಮಲ ಪಕ್ಷದಲ್ಲಿನ ಕೆಲ ಶಾಸಕರನ್ನು ಮೈತ್ರಿ ಸರ್ಕಾರದ ಪರ ಸೆಳೆಯಲು ತಂತ್ರಗಾರಿಕೆ ರೂಪಿಸಲಾಗಿದೆ. ಮೈತ್ರಿ ಸರ್ಕಾರಕ್ಕೆ ಒಪ್ಪಿಗೆ ಸೂಚಿಸುವ ಬಿಜೆಪಿ ಶಾಸಕರಿಗೆ ಉಪ ಚುನಾವಣೆಯನ್ನು ನಡೆಸಿ, ಅವರನ್ನೇ ಮತ್ತೆ ಆಯ್ಕೆಗೊಳಿಸಿ ಸಚಿವ ಸ್ಥಾನ ಭರ್ತಿ ಮಾಡೋಣ ಎಂದು ಉಭಯ ನಾಯಕರುಗಳು ಮಾಸ್ಟರ್​ ಪ್ಲಾನ್ ಹಾಕಿದ್ದಾರೆ.
ನಮ್ಮ ಮೈತ್ರಿ ಸರ್ಕಾರಕ್ಕೆ ಬಿಜೆಪಿ ಪಕ್ಷದಿಂದ 10 ಮಂದಿ ಶಾಸಕರನ್ನು ಸೆಳೆದ್ರೆ, ಮೈತ್ರಿ ಸರ್ಕಾರಕ್ಕೆ ಮತ್ತಷ್ಟು ಬಲ ಬರುತ್ತೆ. ಇದರಿಂದಾಗಿ ಬಿಜೆಪಿಗೆ ನಾವು ಪ್ರಬಲ ಸ್ಪರ್ಧೆ ನೀಡಲು ಸಹಕಾರಿಯಾಗುತ್ತದೆ. ಎರಡ್ಮೂರು ತಿಂಗಳಲ್ಲಿ ಶಾಸಕರನ್ನು ನಮ್ಮತ್ತ ಸೆಳೆಯುವ ಕಾರ್ಯ ಯಶಸ್ವಿಯಾಗಲೇಬೇಕು. ಇಲ್ಲವಾದ್ರೆ ಮುಂದೆ ಕಂಟಕ ತಪ್ಪಿದ್ದಲ್ಲ ಎಂದು ಉಭಯ ನಾಯಕರು ಮಾಸ್ಟರ್​ ಪ್ಲಾನ್​ ಸಜ್ಜು ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಕನಿಷ್ಠ 10 ಶಾಸಕರನ್ನು  ಸೆಳೆದುಕೊಂಡರೇ ಮಾತ್ರ ಮುಂದಿನ 5 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತ ನಡೆಸಲು ಸುಲಭವಾಗುತ್ತದೆ. ಇಲ್ಲವಾದ್ರೆ ಸಣ್ಣಪುಟ್ಟ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ನಮ್ಮನ್ನು ಹಣಿಯುವ ಕೆಲಸಕ್ಕೆ ಮುಂದಾಗಬಹುದು. ಹೀಗಾಗಿ ನಾವು ಎಚ್ಚರಿಕೆಯಿಂದ ಮುಂದೆ ಹೆಜ್ಜೆ ಹಾಕಬೇಕು ಎಂದು ಮೈತ್ರಿ ಸರ್ಕಾರ ಯೋಚಿಸುತ್ತಿದೆ.
ಬಿಜೆಪಿಯಿಂದ ಬರುವ ಶಾಸಕರಿಗೆ ರಾಜೀನಾಮೆ ಕೊಡಿಸಿ, ಆಯಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಸಿ ಅವರನ್ನೇ ಗೆಲ್ಲಿಸಿ ಸಚಿವರನ್ನಾಗಿ ಮಾಡಬೇಕು. ಇಲ್ಲವಾದ್ರೆ ಆಸಮಾಧಾನಗೊಂಡ ಶಾಸಕರಿಗೆ ಆಮಿಷವೊಡ್ಡಿ ಆಪರೇಷನ್ ಕಮಲ ಮಾಡಲು ಬಿಜೆಪಿ ಮುಂದಾಗುತ್ತದೆ. ಬಿಜೆಪಿ ನಮ್ಮನ್ನು ಅತಂತ್ರ ಸ್ಥಿತಿಗೆ ತಳ್ಳುವ ಮೊದಲು ನಾವು ಬಿಜೆಪಿ ಶಾಸಕರನ್ನು ಸೆಳೆಯಬೇಕೆಂಬ ನಿರ್ಧಾರವನ್ನು ಮೈತ್ರಿ ಸರ್ಕಾರದ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com