ಹೈಜಾಕ್ ಅಲ್ಲ, ಬಿಜೆಪಿಯವರ ಹಿಟ್ ವಿಕೆಟ್: ಡಿಕೆ ಸುರೇಶ್

ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಜಾಕ್ ಅಲ್ಲ... ಇದು ಬಿಜೆಪಿಯವರ ಹಿಟ್ ವಿಕೆಟ್ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬಳ್ಳಾರಿ: ಚಂದ್ರಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಹೈಜಾಕ್ ಅಲ್ಲ... ಇದು ಬಿಜೆಪಿಯವರ ಹಿಟ್ ವಿಕೆಟ್ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ರಾಮನಗರ ಉಪಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕೊನೆಯ ಗಳಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ನಾವು ಯಾರನ್ನೂ ಹೈಜಾಕ್ ಮಾಡಿಲ್ಲ. ಬದಲಿಗೆ ಇದು ಬಿಜೆಪಿ ಪಕ್ಷ ಹಿಟ್ ವಿಕೆಟ್ ಆಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸುವಾಗ ಇದ್ದ ಹುಮ್ಮಸ್ಸು ಪ್ರಚಾರದ ಸಂದರ್ಭದಲ್ಲಿ ಇರಲಿಲ್ಲ. ರಾಜ್ಯ ನಾಯಕರು ಚಂದ್ರಶೇಖರ್ ಅವರ ಪರ ಪ್ರಬಲ ಪ್ರಚಾರ ನಡೆಸಿಲ್ಲ. ಬಹುಶಃ ಇದರಿಂದ ಮನನೊಂದು ಚಂದ್ರಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗುವ ಮನಸ್ಸು ಮಾಡಿದ್ದಾರೆ ಎಂದೆನಿಸುತ್ತದೆ. ರಾಮನಗರದಲ್ಲಿ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದರೂ, ಅವರ ಪರ ನಾಯಕರು ಪ್ರಚಾರಕ್ಕೆ ಆಗಮಿಸರಿಲ್ಲ. ಚಂದ್ರಶೇಖರ್ ಅವರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಇದೇ ವೇಳೆ ಡಿಕೆ ಸಹೋದರರೇ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಕಳುಹಿಸಿ ಮತ್ತೆ ವಾಪಸ್ ಕರೆಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ಸಂತೋಷ.. ನಮ್ಮ ಮಾತು ಕೇಳಿ ಬಿಜೆಪಿಯಲ್ಲೂ ಟಿಕೆಟ್ ನೀಡುತ್ತಾರೆ ಎಂಬುದು ಖುಷಿ. ಬಿಜೆಪಿಯಲ್ಲೂ ನಮ್ಮ ನಾಣ್ಯ ನಡೆಯುತ್ತದೆಯಲ್ಲ ಎಂದು ವ್ಯಂಗ್ಯವಾಡಿದರು. ಅಂತೆಯೇ ಬಿಎಸ್ ವೈ ಆರೋಪಕ್ಕೆ ತಿರುಗೇಟು ನೀಡಿದ ಸುರೇಶ್, ಬಿಜೆಪಿಯವರ ನಡವಳಿಕೆ, ಹುಸಿ ಭರವಸೆ ನೀಡಿ ಸುಳ್ಳು ಹೇಳಿ ಚುನಾವಣೆ ನಡೆಸುವ ಅಭ್ಯಾಸಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಇಂದು ಚಂದ್ರಶೇಖರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಡಿಕೆ ಸುರೇಶ್, ಚಂದ್ರಶೇಖರ್ ಅವರು ಮೂಲತಃ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ನಂಬಿ ಬೆಳೆದವರು. ಆದರೆ ಅವರಿಗೆ ಉಂಟಾದ ಕೆಲ ನಿರ್ಧಾರದಿಂದ ದುಡುಕಿದ್ದರು. ಆದರೆ ಇಂದು ಅವರು ತೆಗೆದುಕೊಂಡಿರುವ ನಿರ್ಣಯಕ್ಕೆ ಪಕ್ಷದ ಕಡೆಯಿಂದ ಸ್ವಾಗತ ಕೋರುತ್ತೇನೆ. ಬಿಜೆಪಿ ನಾಯಕರು ಧೋರಣೆಯಿಂದ ಚಂದ್ರಶೇಖರ್ ಬೇಸತ್ತಿದ್ದಾರೆ. ಈಗ 5 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಂಡ್ಯ ಚುನಾವಣೆಗೆ ಎಲ್ಲ ನಾಯಕರು ರಾಮನಗರದ ಮೇಲೆ ಹೋಗಬೇಕು. ಆದರೆ ರಾಮನಗರಕ್ಕೆ ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ಪ್ರಚಾರದ ವೇಳೆ ನಾಯಕರು ಬಾವುಟ ಕೊಟ್ಟು ಹೋದವರು, ಬಾವುಟ ಏನಾಯಿತು ಎಂದು ಕೇಳುವುದಿಲ್ಲ ಎಂದು ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದರು.
ಇನ್ನು ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿಯುವ ವಿಚಾರ ಸಿಎಂ ಕುಮಾರಸ್ವಾಮಿ ಅವರಿಗೆ ತಿಳಿದಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳಿಗೂ ಇದು ಸರ್ ಪ್ರೈಸ್.. ಎಲ್ಲವನ್ನೂ ಎಲ್ಲರಿಗೂ ತಿಳಿಸಲು ಸಾಧ್ಯವಾಗಲ್ಲ. ನಿನ್ನೆ ಅವರೇ ನಮ್ಮನ್ನು ಭೇಟಿ ಮಾಡಿದ್ದರು. ಈ ಮಾಹಿತಿ ಕೊನೆಯವರೆಗೂ ಹೇಳಬಾರದು ಎಂದು ನಿರ್ಧರಿಸಿದ್ದೆವು. ಬಿಜೆಪಿಯಷ್ಟೇ ಅಲ್ಲ ಇದು ಜೆಡಿಎಸ್ ಗೂ ಶಾಕಿಂಗ್ ನ್ಯೂಸ್ ಎಂದು ಸುರೇಶ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com