

ಬೆಂಗಳೂರು:ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದಿನೇ ದಿನೇ ಊಹಾಪೋಹಗಳು ಸೃಷ್ಟಿಯಾಗುತ್ತಿದ್ದು, ಖಾಲಿಯಿರುವ ಏಳು ಸಚಿವ ಸ್ಥಾನ ಹುದ್ದೆಗಳ ಭರ್ತಿ ವಿಳಂಬವಾಗಲು ಮೈತ್ರಿ ಪಕ್ಷವೇ ಕಾರಣ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆಯೇ ಎಂಬ ಸಂಶಯ ಬರುತ್ತಿದೆ.ಇದಕ್ಕೆ ಎರಡೂ ಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳು ಪುಷ್ಠಿ ನೀಡುತ್ತಿವೆ.
ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವ ಆಕಾಂಕ್ಷಿ ಶಾಸಕರು, ನಿಗಮ-ಮಂಡಳಿಗಳ ನೇಮಕ, ರಾಜಕೀಯ ಕಾರ್ಯದರ್ಶಿಗಳ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಎರಡೂ ಪಕ್ಷಗಳು ನಿರತವಾಗಿದ್ದರೂ ಕೂಡ ಸಚಿವ ಸಂಪುಟ ವಿಸ್ತರಣೆ ವಿಳಂಬ ಕುರಿತು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ಸಚಿವ ಸಂಪುಟ ವಿಸ್ತರಣೆ ದಿನಾಂಕವನ್ನು ಹೇಳಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಿನ್ನೆ ದೆಹಲಿಯಲ್ಲಿ ಪ್ರಶ್ನೆಯೊಂದಕ್ಕೆ ಸುದ್ದಿಗಾರರಿಗೆ ಉತ್ತರ ನೀಡಲು ನಿರಾಕರಿಸಿದ್ದು ಸಚಿವ ಸಂಪುಟ ವಿಸ್ತರಣೆ ಮುಂದೂಡಲ್ಪಡುತ್ತದೆ ಎಂಬ ಊಹಾಪೋಹಗಳಿಗೆ ಇನ್ನಷ್ಟು ಇಂಬು ನೀಡುತ್ತದೆ.
ಪ್ರತಿಯೊಬ್ಬರೂ ಸಂಪುಟ ವಿಸ್ತರಣೆಯನ್ನು ಎದುರುನೋಡುತ್ತಿದ್ದಾರೆ. ಆದರೆ ಅದರ ಸಾಧಕ-ಬಾಧಕಗಳನ್ನು ನೋಡಬೇಕಾಗಿದೆ. ಕಾಂಗ್ರೆಸ್ ನಿಂದ ಒಪ್ಪಿಗೆ ಬರಬೇಕಿದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ನಿನ್ನೆ ದೆಹಲಿಯಲ್ಲಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಅವರ ಹೇಳಿಕೆಯಲ್ಲಿನ ಅನಿಶ್ಚಿತತೆ ಅವರು ಈ ಹಿಂದೆ ಅಕ್ಟೋಬರ್ 12ರಂದು ಸಂಪುಟ ವಿಸ್ತರಣೆ ಎಂದು ಹೇಳಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಹಿನ್ನಲೆಯಲ್ಲಿ ಸಚಿವ ಸಂಪುಟ ವಿಸ್ತರಣೆಯನ್ನು ಮುಂದೂಡಲು ಕಾಂಗ್ರೆಸ್ ಬಯಸಿದಂತಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಚುನಾವಣೆಗೂ, ಸಚಿವ ಸಂಪುಟ ವಿಸ್ತರಣೆಗೂ ಯಾವುದೇ ಸಂಬಂಧವಿಲ್ಲ. ಚರ್ಚೆಗಳು ನಡೆಯುತ್ತಿವೆ ಎನ್ನುತ್ತಾರೆ.
ಎರಡೂ ಪಕ್ಷಗಳ ಆಂತರಿಕ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಸಂಪುಟ ವಿಸ್ತರಣೆ ನಂತರ ಪಕ್ಷದ ನಾಯಕರಲ್ಲಿ ಏಳಬಹುದಾದ ಭಿನ್ನಮತ, ಸಿಟ್ಟು, ಆಕ್ರೋಶಗಳ ಬಗ್ಗೆ ನಾಯಕರಿಗೆ ಚಿಂತೆ ಹಚ್ಚಿದೆ. ಸಚಿವ ಸಂಪುಟ ವಿಸ್ತರಣೆ ಕುರಿತು ಅಪಾರ ನಿರೀಕ್ಷೆಯಿದೆ. ವಾರಾಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನುತ್ತಿವೆ ಎರಡೂ ಪಕ್ಷಗಳ ಆಂತರಿಕ ಮೂಲಗಳು.