

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಪಕ್ಷಕ್ಕೆ ಹಲವು ರೀತಿಯಲ್ಲಿ ನೆರವಾಗಿರುವ ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಜೊತೆಗೆ ಇತ್ತೀಚಿಗೆ ಪಕ್ಷದ ಹೈಕಮಾಂಡ್ ಅಸಮಾಧಾನ ಹೊಂದಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ಪ್ರಬಲ ಒಕ್ಕಲಿಗ ನಾಯಕರಾಗಿರುವ ಡಿಕೆ ಶಿವಕುಮಾರ್ ಅವರ ಆಪ್ತ ವಲಯ ಹಾಗೂ ಹೈ ಕಮಾಂಡ್ ಮೂಲಗಳಿಂದ ಈ ಮಾಹಿತಿ ತಿಳಿದುಬಂದಿದ್ದು, ಡಿ. ಕೆ. ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ನಾಯಕರಾಗಿ ಬೆಳೆಯಲು ಅವರ ಆಕ್ರಮಣಕಾರಿ ನೀತಿಯೂ ಸರ್ಕಾರಕ್ಕೆ ದುಬಾರಿಯಾಗಿ ಪರಿಣಮಿಸಿದೆ ಹಾಗೂ ಪಕ್ಷದಲ್ಲಿ ಬೆಳವಣಿಗೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ವೇಣುಗೋಪಾಲ್ ಅವರೊಂದಿಗೂ ಹೊಂದಾಣಿಕೆಯೊಂದಿಗೆ ಹೋಗುತ್ತಿಲ್ಲ ಎಂದು ಪಕ್ಷದ ಆಂತರಿಕ ವಲಯದಿಂದ ಕೇಳಿಬಂದಿದೆ. ಇತ್ತೀಚಿಗೆ ಡಿ. ಕೆ. ಶಿವಕುಮಾರ್ ತಮ್ಮ ನಿವಾಸದಲ್ಲಿ ಸಚಿವರಿಗೆ ಆಯೋಜಿಸಿದ್ದ ಉಪಹಾರ ಕೂಟ ಸಚಿವರೊಂದಿಗೆ ಹಿಡಿತ ಸಾಧಿಸುವುದರ ಜೊತೆಗೆ ಸುಗಮ ಸರ್ಕಾರ ಸಾಗಲು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಎಂಬಂತೆ ಕಂಡುಬಂದಿತ್ತು.
ಪ್ರಬಲವಾದ ನೀರಾವರಿ ಖಾತೆ ಹೊಂದಿರುವ ಡಿ. ಕೆ. ಶಿವಕುಮಾರ್ ನೀರಾವರಿ ವಿಚಾರದಲ್ಲೂ ರಾಜಕಾರಣ ಮಾಡುವ ಮೂಲಕ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಬಲರಾಗಿರುವ ಒಕ್ಕಲಿಗ ಸಮುದಾಯದಲ್ಲಿ ತಮ್ಮ ನಾಯಕತ್ವ ಬಗ್ಗೆ ಹೆಚ್ಚಿನ ಒಲವು ಮೂಡಿಸುತ್ತಿರುವುದು ಹೈಕಮಾಂಡ್ ಗೆ ಅಸಮಾಧಾನಕ್ಕೆ ಮತ್ತೊಂದು ಕಾರಣ ಎನ್ನಲಾಗಿದೆ.
ಪಕ್ಷದಲ್ಲಿ ಡಿ.ಕೆ. ಶಿವಕುಮಾರ್ ಸರ್ವಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದರ ವಿರುದ್ದ ರಾಜ್ಯದ ಅನೇಕ ನಾಯಕರು ಎಐಸಿಸಿಗೆ ದೂರು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಹಾಗೂ ಇಡಿಯಲ್ಲಿ ಪ್ರಕರಣ ದಾಖಲು ವಿರುದ್ಧ ಪಕ್ಷ ವಿರೋಧಿಸಿದೆ. ಆದರೆ. ಆಂತರಿಕವಾಗಿ ಅವರ ಬಗ್ಗೆ ಅಸಮಾಧಾನ ಇದ್ದೆ ಇದೆ ಎಂದು ತಿಳಿದುಬಂದಿದೆ.
ಆದರೆ, ಆಕ್ರಮಣಕಾರಿ ಮತ್ತು ಸಮರ್ಥನೀಯ ವ್ಯಕ್ತಿತ್ವ ಡಿ.ಕೆ. ಶಿವಕುಮಾರ್ ಅವರ ಹುಟ್ಟುಗುಣ. ರಾಜಕಾರಣದಲ್ಲಿ ಅವರು ಈ ಮಟ್ಟಕ್ಕೆ ಬೆಳೆಯಲು ಈ ಗುಣಗಳೇ ನೆರವು ನೀಡಿವೆ. ಮುಂದೆಯೂ ಇವೇ ನೆರವು ನೀಡುವುದಾಗಿ ಅವರು ಭಾವಿಸಿರುವುದಾಗಿ ಡಿ. ಕೆ. ಶಿವಕುಮಾರ್ ಆಪ್ತರು ಹೇಳುತ್ತಾರೆ.