ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಗೊಂದಲ ಮುಂದುವರೆದಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಅವರು ಗುರುವಾರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ.
ಇಂದು ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಮಹೇಶ್ ಅವರು, ನಾನು ಕೇವಲ ಸಚಿವ ಸ್ಥಾನಕ್ಕೆ ಮಾತ್ರ ರಾಜಿನಾಮೆ ನೀಡಿದ್ದೇನೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲ ಮುಂದುವರಿಸುತ್ತೇನೆ ಎಂದರು.
ಜೆಡಿಎಸ್ ಮತ್ತು ಬಿಎಸ್‌ಪಿ ಮಧ್ಯೆ ಚುನಾವಣಾ ಪೂರ್ವ ಮೈತ್ರಿಯಾಗಿತ್ತು. ಕುಮಾರಸ್ವಾಮಿ ನನಗೆ ದೊಡ್ಡ ಖಾತೆಯನ್ನೇ ಕೊಟ್ಟಿದ್ದರು. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಚಾಮರಾಜನಗರ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್ ಮಹೇಶ್ ಹೇಳಿದ್ದಾರೆ.
ತಮ್ಮ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಲು ಹಾಗೂ ಮುಂದಿನ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಮಹೇಶ್ ಅವರು ಹೇಳಿದ್ದಾರೆ. ಆದರೆ ವಾರದ ಹಿಂದೆಯೇ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಹಿಳೆ ಅವರ ರಾಜಿನಾಮೆ ಪಡೆಯುವಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಒತ್ತಡ ಹಾಕಿದ್ದರು ಎನ್ನಲಾಗಿದೆ.
ವೈಯಕ್ತಿಕ ಕಾರಣಗಳಿಂದಾಗಿ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದು, ರಾಜಿನಾಮೆಯನ್ನು ಅಂಗೀಕರಿಸಬೇಕು ಎಂದು ಮುಖ್ಯಂತ್ರಿಗಳಿಗೆ ಬರೆದ ಪತ್ರದಲ್ಲಿ ಮಹೇಶ್ ಉಲ್ಲೇಖಿಸಿದ್ದಾರೆ.