ದೆಹಲಿಯಿಂದ ಎಚ್ಚರಿಕೆ ಬಂದ ಮೇಲೆ ಗೋಲಿಬಾರ್ ಸಂತ್ರಸ್ತರಿಗೆ ಪರಿಹಾರ ಹಿಂಪಡೆಯಲಾಗಿದೆ- ಡಿಕೆಶಿ
ಬೆಂಗಳೂರು: ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರವನ್ನು ದೆಹಲಿ ವರಿಷ್ಠರ ಎಚ್ಚರಿಕೆ ನಂತರ ಹಿಂಪಡೆಯಲಾಗಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 'ರಾಜ್ಯ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ'. ನಮ್ಮಲ್ಲಿ ಯಾರಾದರೂ ಈ ರೀತಿ ಸತ್ತರೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿ ನಂತರ ಅದನ್ನು ಹಿಂಪಡೆದಿದೆ. ಇದು ಸರ್ಕಾರದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಬಿಜೆಪಿ ನಾಯಕರೇ ಹೇಳಿರುವ ಪ್ರಕಾರ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಬಳಿಕ ದೆಹಲಿ ನಾಯಕರು ಕರೆ ಮಾಡಿ, ನಿಮಗೆ ಪರಿಹಾರ ನೀಡಲು ಹೇಳಿದ್ದು ಯಾರು? ಎಂದು ಎಚ್ಚರಿಕೆ ನೀಡಿದರು. ಹೀಗಾಗಿ ಸರ್ಕಾರ ಪರಿಹಾರ ಹಿಂಪಡೆದಿದೆ ಎಂದರು.
ಗೋಲಿಬಾರ್ ನಲ್ಲಿ ಮೃತಪಟ್ಟವರು ತಪ್ಪಿತಸ್ಥರೋ ಅಥವಾ ಇಲ್ಲವೋ ಎಂಬುದನ್ನು ತನಿಖೆ ಮೂಲಕ ತಿಳಿಯಬೇಕು. ಆದರೆ ಇವರೇ ಅಮಾಯಕರನ್ನು ತಪ್ಪಿತಸ್ಥರು ಎಂದು ತೀರ್ಮಾನ ಮಾಡಿದ್ದಾರೆ. ಅವರನ್ನು ಅಪರಾಧಿ ಎಂದು ನಿರ್ಧರಿಸಿ ಅವರಿಗೆ ಕೊಟ್ಟಿದ್ದ ಚೆಕ್ ಅನ್ನು ತಡೆ ಹಿಡಿದಿದ್ದಾರೆ. ಮಾನವೀಯತೆ ಇಲ್ಲದ ಸರ್ಕಾರ ಇದಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರ ಪುಸ್ತಕ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಪುಸ್ತಕ ಬರೆದವರನ್ನು ಕೇಳಿ, ಇಲ್ಲ ಪುಸ್ತಕ ಓದಿರುವವರನ್ನು ಕೇಳಿ.ದೇವೇಗೌಡರು ಮೊದಲು ಶಾಸಕನಾದಾಗ ನಾನು ಹುಟ್ಟಿದ್ದು, ಅವರು ಯಾವಾಗ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಂದಿದ್ದರೋ ಗೊತ್ತಿಲ್ಲ. ನಾನು ಶಾಸಕನಾದಾಗ ಪಕ್ಷ ಸೇರಲು ಬಂದಿದ್ದರೆ ಆ ಬಗ್ಗೆ ಮಾತನಾಡುತ್ತಿದ್ದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ