ಸಚಿವರಿಗೆ  ಖಾತೆ ಹಂಚಿಕೆ:  ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ? 

ನೂತನ ಸಚಿವರುಗಳಿಗೆ ಇಂದು ಮಧ್ಯಾಹ್ನ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ.ಇಂದೇ ಖಾತೆ ಹಂಚಿಕೆ ಮಾಡುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಾರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ನೂತನ ಸಚಿವರುಗಳಿಗೆ ಇಂದು ಮಧ್ಯಾಹ್ನ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಖಾತೆ ಹಂಚಿಕೆ, ಸರ್ಕಾರದ ಬಗ್ಗೆ ನೀವೆ ನಿರ್ಧಾರ ಮಾಡಿಕೊಳ್ಳಿ ಎಂದು ಜೆ. ಪಿ. ನಡ್ಡಾ ಮೂಲಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದು, ಇಂದೇ ಖಾತೆ ಹಂಚಿಕೆ ಮಾಡುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಯಾರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಅನರ್ಹ ಶಾಸಕರ ಬೇಡಿಕೆಗೆ ಸಂಬಂಧಿಸಿದಂತೆ ನೀವೆ ಬಗೆಹರಿಸಿಕೊಳ್ಳುವಂತೆ ಸೂಚಿಸಿರುವ ಅಮಿತ್ ಶಾ,  ಪದೇ ಪದೇ ದೆಹಲಿಗೆ ಬಾರದಂತೆ ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ಮಾಡಲು ಮುಂದಾಗಿರುವ ಯಡಿಯೂರಪ್ಪ , ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಶಮನ ಮಾಡಲು ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಮಾಡಲು ಯೋಚಿಸಿದ್ದಾರೆ.

ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲದಂತಹ ಪ್ರಮುಖ ಖಾತೆಗಳ ಮೇಲೆ ಅನರ್ಹ ಶಾಸಕರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಇದೇ ಖಾತೆಗಳ ಮೇಲೆ ಬಿಜೆಪಿ ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ, ಬಸವರಾಜ್ ಬೊಮ್ಮಾಯಿ ಅಂತಹ ನಾಯಕರು ಕಣ್ಣಿಟ್ಟಿದ್ದಾರೆ.  ಇಂತಹ ಸಂದಿಗ್ದ ಸಂದರ್ಭದಲ್ಲಿ ಸಿಲುಕಿರುವ ಯಡಿಯೂರಪ್ಪ,  ಪ್ರಮುಖ ಖಾತೆಗಳಿಗೆ ಎರಡೆರಡು ಖಾತೆಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ.

ಸದ್ಯದಲ್ಲಿಯೇ ಸಂಪುಟ ವಿಸ್ತರಣೆಯಾಗಲಿದ್ದು, ಉಮೇಶ್ ಕತ್ತಿ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ತಿಪ್ಪಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಚಿಂತನೆ ನಡೆಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com