ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾದ ಉಪಚುನಾವಣೆ 

ಅತಿ ನಿರೀಕ್ಷಿತ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಗುರುವಾರದಿಂದ ಆರಂಭವಾಗಿದ್ದು, ಮೂರೂ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ.  
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅತಿ ನಿರೀಕ್ಷಿತ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಗುರುವಾರದಿಂದ ಆರಂಭವಾಗಿದ್ದು, ಮೂರೂ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. 

ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಸದರಿ ಕ್ಷೇತ್ರಗಳಲ್ಲಿ ಮತದಾರರು ಉಮೇದುವಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಸಲಿದ್ದಾರೆ. ಈ ಉಪಚುನಾವಣೆ ಅನರ್ಹ ಶಾಸಕರಿಗೆ ಮತ್ತು ಯಡಿಯೂರಪ್ಪ ಅವರಿಗೆ ಮಾಡು ಇಲ್ಲವೇ ಮಡಿ ಎನ್ನುವಂತಹ ಇಕ್ಕಟ್ಟಿನ ಸನ್ನಿವೇಶ ನಿರ್ಮಾಣ ಮಾಡಿದೆ. 

ಒಂದು ವೇಳೆ ಈ ಚುನಾವಣೆಯಲ್ಲಿ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಗೆದ್ದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಬಹುದು. ಆದರೆ, ಸೋಲು ಅನುಭವಿಸಿದವರಿಗೆ ಈ ವಿಧಾನಭೆಯ ಅವಧಿ ಮುಗಿಯವವರೆಗೂ ಸಚಿವ ಸ್ಥಾನ ಹೇಗಲು ನಿಗಮ-ಮಂಡಳಿಗಳ ಅಧ್ಯಕ್ಷಗಿರಿಯ ಅಧಿಕಾರವನ್ನೂ ಅನುಭವಿಸುವುದು ದುಸ್ತರವಾಗಲಿದೆ. 

ಹಾಗೊಂದು ವೇಳೆ ಅಧಿಕಾರಯುತ ಸ್ಥಾನಗಳನ್ನು ಅನುಭವಿಸಲೇಬೇಕು ಎಂದಾದಲ್ಲಿ ವಿಧಾನಪರಿಷತ್ತಿಗೆ ಚುನಾಯಿತರಾಗಬೇಕಾಗುತ್ತದೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಅದು ಅಷ್ಟು ಸುಲಭವಾಗಿಲ್ಲ. ಯಾವುದೇ ಸ್ಥಾನವೂ ಖಾಲಿಯಿಲ್ಲ. ಇರುವವರನ್ನು ರಾಜೀನಾಮೆ ಕೊಡಿಸಬೇಕಾದರೆ ಮತ್ತೊಂದು ಸುತ್ತಿನ ಹರಸಾಹಸವನ್ನೇ ಮಾಡಬೇಕಾಗುತ್ತದೆ. ಮೇಲಾಗಿ, ಇದಕ್ಕೆ ಬಿಜೆಪಿ ಹೈಕಮಾಂಡ್ ಎಷ್ಟರ ಮಟ್ಟಿಗೆ ಅನುಮೋದನೆ ನೀಡುತ್ತದೆ ಎಂಬುದು ಅನುಮಾನವಾಗಿದೆ. ಹೀಗಾಗಿ ಈಗಿರುವ ಉಪಚುನಾವಣೆಯನ್ನೇ ತಮ್ಮ ರಾಜಕೀಯ ಭವಿಷ್ಯಕ್ಕೆ ಮೆಟ್ಟಿಲನ್ನಾಗಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. 

ಕಾಂಗ್ರೆಸ್, ಜೆಡಿಎಸ್ ನಾಯಕರು ಶತಾಯಗತಾಯ ಅನರ್ಹ ಶಾಸಕರನ್ನು ಸೋಲಿಸಲೇಬೇಕು ಎಂಬ ಹಟಕ್ಕೆ ಬಿದ್ದವರಂತೆ ಪ್ರಚಾರ ಮಾಡುತ್ತಿದ್ದಾರೆ. ಅನರ್ಹತೆ ಕಾರಣ ಮುಂದಿಟ್ಟು ಬಗ್ಗುಬಡಿವ ತಂತ್ರ ರೂಪಿಸಿದ್ದಾರೆ. ಅವರ ತಂತ್ರ ಯಶಸ್ವಿಯಾಗಿ ಅನರ್ಹ ಶಾಸಕರಿಗೆ ಸೋಲಾದರೆ ಇವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ. 

17 ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಅವರಿಗೆ ಉಪಚುನಾವಣೆಗೆ ಸ್ಪರ್ಧಿಸಲು ಹಸಿರು ನಿಶಾನೆ ತೋರಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ಚುನಾವಣೆಯಲ್ಲಿ ಆಯ್ಕೆಯಾಗದ ಹೊರತು ಯಾವ ಅಧಿಕಾರಯುತ ಸ್ಥಾನ ಅನುಭವಿಸುವಂತಿಲ್ಲ ಎಂದು ತೀರ್ಪಿತ್ತಿರುವುದರಿಂದ ಈ ಚುನಾವಣೆ ಅನರ್ಹ ಶಾಸಕರಿಗೆ ಮಹತ್ವದ್ದಾಗಿದೆ. 

ಈ ಪೈಕಿ ಇದೀಗ ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪುರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಕೆ.ಆರ್.ಪೇಟೆ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಇನ್ನುಳಿದಂತೆ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ದಾಖಲಿಸಿರುವ ಮೊಕದ್ದಮೆಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಲಾಗಿಲ್ಲ. 

ಇನ್ನು ಅನರ್ಹ ಶಾಸಕರ ಪೈಕಿ ರಾಣೆಬೆನ್ನೂರಿನ ಆರ್.ಶಂಕರ್ ಮತ್ತು ಶಿವಾಜಿನಗರಗದ ರೋಷನ್ ಬೇಗ್ ಉಪಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಶಂಕರ್ ಅವರು ಪಟ್ಟು ಹಿಡಿದಿದ್ದಲ್ಲಿ ಟಿಕೆಟ್ ನೀಡಲು ಆಡಳಿತಾರೂಢ ಬಿಜೆಪಿ ಸಿದ್ಧವಿತ್ತು. ಆದರೆ, ಸೋಲುವ ಬಗ್ಗೆ ಆಂತರಿಕ ವರದಿಯಲ್ಲಿ ಭೀತಿ ಉಂಟಾಗಿದ್ದರಿಂದ ಶಂಕರ್ ಸ್ಪರ್ಧಿಸಲು ನಿರಾಕರಿಸಿದರು. ಇನ್ನು ಶಿವಾಜಿನಗರದಿಂದ ರೋಷನ್ ಬೇಗ್ ಅವರು ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಐಎಂಎ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವುದನ್ನು ಮುಂದಿಟ್ಟು ಪಕ್ಷದ ಹೈಕಮಾಂಡ್ ಹಿಂದೇಟು ಹಾಕಿತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಧೈರ್ಯವನ್ನೂ ಮಾಡದ ಬೇಗ್ ಅವರು ಅಂತಿಮವಾಗಿ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ. 

ಉಪಚುನಾವಣೆ ಕೇವಲ ಮೂರು ಪಕ್ಷಗಳಿಗಷ್ಟೇ ಅಲ್ಲಗೆ, ಪೀಳಿಗೆಯ ನಾಯಕರನ್ನು ನಿರ್ಧರಿಸುವ ಚುನಾವಣೆ ಕೂಡ ಆಗಿದೆ. ಚುನಾವಣೆ ಫಲಿತಾಂಶದ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತನ್ನ ಭವಿಷ್ಯದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. 

ಈಗಾಗಲೇ ಡಿಕೆ.ಶಿವಕುಮಾರ್, ಲಕ್ಷ್ಮಣ್ ಸವದಿ, ಡಾ.ಅಶ್ವತ್ ನಾರಾಯಣ್ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅನರ್ಹ ಶಾಸಕರೂ ಕೂಡ ಭವಿಷ್ಯದ ನಾಯಕರೆಂದು ಹೇಳಲಾಗುತ್ತಿದೆ. ಉಪಚುನಾವಣೆಯಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ 15 ಕ್ಷೇತ್ರಗಳ ಪೈಕಿ 6  ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ವಿಧಾನಮಂಡಲದ ಸದಸ್ಯತ್ವದ 222 ಬಲಾಬಲದಲ್ಲಿ ಬಿಜೆಪಿ 106 ಸ್ಥಾನವನ್ನು ಹೊಂದಿದೆ. ಇದರಲ್ಲಿ ಸ್ವತಂತ್ರ ಅಭ್ಯರ್ಥಿ ನಾಗೇಶ್ ಕೂಡ ಸೇರಿಕೊಂಡಿದ್ದಾರೆ. ಬಹುಮತಕ್ಕಾಗಿ ಬಿಜೆಪಿಗೆ ಇನ್ನೂ ಆರು ಸ್ಥಾನಗಳ ಅಗತ್ಯವಿದೆ. 

ಇನ್ನು ಕಾಂಗ್ರೆಸ್ 66 ಸೀಟುಗಳನ್ನು ಹೊಂಡಿದ್ದು, ಜೆಡಿಎಸ್ 34 ಹೊಂದಿದೆ. ಎರಡೂ ಪಕ್ಷಗಳು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇ ಆದರೆ, ಮತ್ತೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಸಾಧ್ಯತೆಗಳಿವೆ. 

ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಬ್ಬರ ಪ್ರಚಾರ ಕೂಡ ನಡೆಸಿದ್ದು, ಲಿಂಗಾಯತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿಯವರು ಒಕ್ಕಲಿಗರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದರಂತೆ ಜೈಲಿನಿಂದ ಹೊರಬಂದಿದ್ದ ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗರ ಮನಗೆಲ್ಲಲು ಯತ್ನಿಸಿದ್ದಾರೆ. 

ಒಂದು ವೇಳೆ 15 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ, ಬಿಜೆಪಿಯಲ್ಲಿ ಆಂತರಿಕ ಕಲಹ ಎದುರಾಗಲಿದೆ. ಗೆಲುವಿನ ನಗೆ ಬೀರಿದರೂ, ಮತ್ತೊಂದೆಡೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ಉಪಚುನಾವಣೆಯಲ್ಲಿ ಅನರ್ಹರಿಗೆ ಟಿಕೆಟ್ ನೀಡಿದ್ದಕ್ಕೆ ಬಿಜೆಪಿಯಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಇನ್ನು ಅನರ್ಹ ಶಾಸಕರು ಗೆಲುವು ಸಾಧಿಸಿ ಬಂದರೆ, ಬಿಜೆಪಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com