ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಪಚುನಾವಣೆ: ಸೋಲು-ಗೆಲುವಿನ ಲೆಕ್ಕಾಚಾರದ ನಡುವೆಯೇ ಹೆಚ್ಚಿದ ಬೆಟ್ಟಿಂಗ್ ಭರಾಟೆ

ಉಪಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ಒಂದೆಡೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮತ್ತೊಂದೆಡೆ ಬೆಟ್ಟಿಂಗ್ ಭರಾಟೆ ಜೋರಾಗಿದೆ. 

ಬೆಂಗಳೂರು: ಉಪಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ಒಂದೆಡೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮತ್ತೊಂದೆಡೆ ಬೆಟ್ಟಿಂಗ್ ಭರಾಟೆ ಜೋರಾಗಿದೆ. 

ನೆಚ್ಚಿನ ಅಭ್ಯರ್ಥಿಗಳನ್ನು ನಂಬಿ ಬೆಟ್ಟಿಂಗ್ ದೊರೆಗಳು, ಗೋವಾ ಪ್ರವಾಸ, ಕುರಿ, ದ್ವಿಚಕ್ರ ವಾಹನಗಳ ಜೊತೆಗೆ ಲಕ್ಷಗಟ್ಟಲೆ ಹಣ ಪಣಕ್ಕಿಡುತ್ತಿದ್ದಾರೆ. ಹುಣಸೂರು, ಕೆ.ಆರ್.ಪೇಟೆ, ಹೋಸಕೋಟೆ, ಚಿಕ್ಕಬಳ್ಳಾಪುರ, ಗೋಕಾಕ್ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಕೆ.ಆರ್.ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಹಲವು ಜನರು ಜೆಡಿಎಸ್ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. 

ಹುಣಸೂರಿನಲ್ಲಿ ಉದ್ಯಮಿಯಾಗಿರುವ ಮುಖ್ತಾರ್ ಎಂಬುವವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರವಾಗಿ ರೂ.2 ಲಕ್ಷ ಬೆಟ್ಟಿಂಗ್ ಕಟ್ಟಿದ್ದೇನೆ. ನನ್ನ ಗೆಳೆಯ ಕಾಂಗ್ರೆಸ್ ರೂ.5 ಲಕ್ಷ ಬೆಟ್ಟಿಂಗ್ ಕಟ್ಟಿದ್ದಾನೆ. ಹಿಂದಿನ ಚುನಾವಣೆಯಲ್ಲಿ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ಕಾಂಗ್ರೆಸ್ ಪಕ್ಷ ಸ್ಫಷ್ಟ ಬಹುಮತ ಪಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಈ ಬಾರಿ ವಿಶ್ವನಾಥ್ ಅವರು ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸವಿದೆ. ನನ್ನ ಗೆಳೆಯ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಪರವಾಗಿ ಬೆಟ್ಟಿಂಗ್ ಕಟ್ಟಿದ್ದಾನೆಂದು ರಾಮು ಎಂಬುವವರು ಹೇಳಿದ್ದಾರೆ. 

ಹೋಸಕೋಟೆ ಹಾಗೂ ಚಿಕ್ಕಬಳ್ಳಾಪುರದಲ್ಲಿ ರೂ.10ರಿಂದ 15 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟಿರುವುದಾಗಿ ವರದಿಗಳು ತಿಳಿಸಿವೆ. ಶರತ್ ಬಚ್ಚೇಗೌಡ ಪರವಾಗಿ ಬೆಟ್ಟಿಂಗ್ ಕಟ್ಟಿದ್ದೇನೆ. ಶರತ್ ಸ್ವತಂತ್ರ ಅಭ್ಯರ್ಥಿಯಾಗಿದ್ದು, ಅವರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಆದರೂ, ಈ ಬಾರಿ ಶರತ್ ಅವರೇ ಗೆಲ್ಲುತ್ತಾರೆ. ರೂ.15 ಲಕ್ಷ ಸೋತರೂ ನನಗೇನೂ ಚಿಂತೆಯಿಲ್ಲ ಎಂದು ಹೊಸಕೋಟೆ ನಿವಾಸಿ ರಾಮಚಂದ್ರ ಗೌಡ ಎಂಬುವವರು ಹೇಳಿದ್ದಾರೆ. 

ಇನ್ನು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಸುಧಾಕರ್ ಹಾಗೂ ಕಾಂಗ್ರೆಸ್ ಪಕ್ಷದ ಅಂಜನಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಇಬ್ಬರೂ ನಾಯಕರು ಒಂದೇ ಪಕ್ಷಕ್ಕೆ ಸೇರಿದವರಾಗಿದ್ದರು. ಇದೀಗ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅವರು ಗೆದ್ದಿದ್ದೇ ಆದರೆ, ಅಂಜನಪ್ಪ ಬೆಂಬಲಿಗರು ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇವೆಂದು ಬೆಟ್ಟಿಂಗ್ ಕಟ್ಟಿದ್ದಾರೆ. ಒಂದು ವೇಳೆ ಸೋತಿದ್ದೇ ಆದರೆ, ಸುಧಾಕರ್ ಬೆಂಬಲಿಗರು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆಂದು ಹೇಳಲಾಗುತ್ತಿದೆ. 

ಗೋವಾ ಪ್ರವಾಸ ಅಷ್ಟೇ ಅಲ್ಲದೆ, ಇನ್ನು ಕೆಲ ಜನರು ಕುರಿ, ಮೇಕೆಗಳನ್ನಿಟ್ಟು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಇನ್ನು ಕೆಲವರು ಮೊಬೈಲ್ ಫೋನ್ ಗಳನ್ನಿಟ್ಟು ಬೆಟ್ಟಿಂಗ್ ಕಟ್ಟುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

Related Stories

No stories found.

Advertisement

X
Kannada Prabha
www.kannadaprabha.com