ಪೌರತ್ವ ಮಸೂದೆ ಬಿಡಿ, ಬಿಎಸ್'ವೈಗಿದು ಸಂಪುಟ ವಿಸ್ತರಣೆಯ ಸಮಯ

ದೇಶದಾದ್ಯಂತ ಪೌರತ್ವ (ತಿದ್ದುಪಡಿ) ಮಸೂದೆ ಕುರಿತಂತೆ ಭಾರೀ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಪೌರತ್ವ ಮಸೂದೆ ಕುರಿತು ಇಡೀ ರಾಷ್ಟ್ರವೇ ತಲೆಕೆಡಿಸಿಕೊಂಡಿದೆ. ಆದರೆ, ಯಡಿಯೂರಪ್ಪ ಅವರಿಗೆ ಮಾತ್ರ ಸಂಪುಟ ವಿಸ್ತರಣೆ ಕುರಿತು  ತಲೆಬಿಸಿ ಶುರುವಾಗಿದೆ. 
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ದೇಶದಾದ್ಯಂತ ಪೌರತ್ವ (ತಿದ್ದುಪಡಿ) ಮಸೂದೆ ಕುರಿತಂತೆ ಭಾರೀ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಪೌರತ್ವ ಮಸೂದೆ ಕುರಿತು ಇಡೀ ರಾಷ್ಟ್ರವೇ ತಲೆಕೆಡಿಸಿಕೊಂಡಿದೆ. ಆದರೆ, ಯಡಿಯೂರಪ್ಪ ಅವರಿಗೆ ಮಾತ್ರ ಸಂಪುಟ ವಿಸ್ತರಣೆ ಕುರಿತು  ತಲೆಬಿಸಿ ಶುರುವಾಗಿದೆ. 

ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಬಾರಿ ಡಿ.14ರೊಳಗಾಗಿ ಸಂಪುಟ ವಿಸ್ತರಣೆ ಮಾಡುವತ್ತ ಯಡಿಯೂರಪ್ಪ ಅವರು ಗಮನ ಹರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದೆ. ಪ್ರಸ್ತುತ ಶಾಸಕರ ಪಟ್ಟಿಯನ್ನು ಪಡೆದುಕೊಂಡಿರುವ ಯಡಿಯೂರಪ್ಪ ಅವರು, ಇಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಸಂಪುಟಕ್ಕೆ ಯಾವ ಯಾವ ನಾಯಕರನ್ನು ಸೇರ್ಪಡೆಗೊಳಿಸಿಕೊಳ್ಳಬೇಕೆಂಬುದರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. 

ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಜಾರ್ಖಾಂಡ್ ವಿಧಾನಸಭಾ ಚುನಾವಣೆ ಹಾಗೂ ಸಂಸತ್ ಅಧಿವೇಶನಗಳ ಕಾರ್ಯಗಳತ್ತ ಮಗ್ನರಾಗಿದ್ದು, ಉಭಯ ನಾಯಕರನ್ನು ಯಡಿಯೂರಪ್ಪ ಅವರು ವೈಯಕ್ತಿಕವಾಗಿಯೇ ಭೇಟಿಯಾಗುವ ಸನ್ನಿವೇಶ ಎದುರಾಗಿದೆ. ಬುಧವಾರದೊಳಗಾಗಿ ಅಮಿತ್ ಶಾ ಅವರು ಪಟ್ಟಿಗೆ ಒಪ್ಪಿಗೆ ಸೂಟಿಸಿದ್ದೇ ಆದರೆ, ಡಿ.12ಕ್ಕೆ ಸಂಪುಟ ವಿಸ್ತರಣೆಯಾಗಲಿದೆ. ಧನುರ್ಮಾಸ ಆರಂಭವಾಗಿದ್ದೇ ಆದರೆ ಜ.14ರ ಸಂಕ್ರಾಂತಿವರೆಗೂ ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಉತ್ತಮ ಕಾರ್ಯಗಳನ್ನು ಧನುರ್ಮಾಸದಲ್ಲಿ ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎಂಬ ಮಾತನ್ನು ಇದೀಗ ಮತ್ತೆ ಯಡಿಯೂರಪ್ಪ ಅವರು ಪುನರುಚ್ಚರಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ 12 ಅನರ್ಹ ಶಾಸಕರ ಪೈಕಿ 11 ಮಂದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಈ ಬಾರಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. 

ಇನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಯವರಿಗೆ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಆದರೆ, ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತಂತೆಯೂ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com