ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ: ಕೇಂದ್ರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು

ಕಾಂಗ್ರೆಸ್ ಸಂಸ್ಥಾಪನಾ ದಿನವಾದ ಶನಿವಾರ ಕಾಂಗ್ರೆಸ್ ನಾಯಕರು ಭಾರತ ಮತ್ತು ಸಂವಿಧಾನ ರಕ್ಷಣೆಗಾಗಿ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ಮೂಲಕ ಸದ್ಭಾವನಾ ಯಾತ್ರೆ ನಡೆಸಿ, ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶಿಸಿದರು.
ಕಾಂಗ್ರೆಸ್ ನಾಯಕರ ಪಾದಯಾತ್ರೆ
ಕಾಂಗ್ರೆಸ್ ನಾಯಕರ ಪಾದಯಾತ್ರೆ

ಬೆಂಗಳೂರು: ಕಾಂಗ್ರೆಸ್ ಸಂಸ್ಥಾಪನಾ ದಿನವಾದ ಶನಿವಾರ ಕಾಂಗ್ರೆಸ್ ನಾಯಕರು ಭಾರತ ಮತ್ತು ಸಂವಿಧಾನ ರಕ್ಷಣೆಗಾಗಿ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆ ಮೂಲಕ ಸದ್ಭಾವನಾ ಯಾತ್ರೆ ನಡೆಸಿ, ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶಿಸಿದರು.

ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಬಿಜೆಪಿ ಆರ್‌ಎಸ್‌ಎಸ್‌ನವರು ಚತುರ್ವರ್ಣ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವುದರಿಂದ ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎಂದ ಪ್ರಧಾನಿ ಮೋದಿ. ಪುಲ್ವಾಮ ದಾಳಿ, ಕಾಶ್ಮೀರ ವಿಶೇಷ ಕಾಯಿದೆ ರದ್ದು ಮಾಡಿದಾಗ ಮೋದಿ ಮೋದಿ ಎನ್ನುತ್ತಿದ್ದ ಯುವಕರೇ ಈಗ ಮೋದಿಗೆ ಮೂರು ನಾಮ ಹಾಕಲು ಮುಂದಾಗಿದ್ದಾರೆ. ಎನ್ ಆರ್ ಸಿ ವಿಚಾರವಾಗಿ ದೇಶದ ಯುವಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಯುವಕರು ಬಿಜೆಪಿಯನ್ನು ಕಿತ್ತು ಒಗೆಯಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಪ್ರಸಕ್ತ ಇರುವ ರಾಷ್ಟ್ರೀಯ ಪಕ್ಷಗಳು ಎಂದರೆ ಅದು ಬಿಜೆಪಿ ಮತ್ತು ಕಾಂಗ್ರೆಸ್. ಕಮ್ಯುನಿಸ್ಟ್ ಪಕ್ಷ ತನ್ನ ರಾಷ್ಟ್ರೀಯತನವನ್ನು ಕಳೆದುಕೊಂಡಿದೆ. ಜನರು ಬಿಜೆಪಿ ಮುಕ್ತ ಭಾರತ ಮಾಡಲು ಹೊರಟಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ರಾಜ್ಯಗಳ ಚುನಾವಣಾ ಫಲಿತಾಂಶಗಳೆ ಉತ್ತಮ ಉದಾಹರಣೆ. ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಯಾರೂ ನಿರಾಶರಾಗಬೇಕಾಗಿಲ್ಲ ಎಂದು ಕಾರ್ಯಕರ್ತರಿಗೆ ತಮ್ಮ ಮಾತಿನ ಮೂಲಕ ಉತ್ಸಾಹ ತುಂಬುವ ಪ್ರಯತ್ನ ಮಾಡಿದರು.

ಯಡಿಯೂರಪ್ಪ ಅವರಿಗೆ ಎಂದಿಗೂ ಬಹುಮತ ಸಿಕ್ಕಿಲ್ಲ. ಈ ಯಡಿಯೂರಪ್ಪ ಹಿಂಬಾಗಿಲಿಂದ ಅಧಿಕಾರಕ್ಕೆ ಬಂದ ಗಿರಾಕಿ.1925ರಲ್ಲಿ ಆರ್.ಎಸ್.ಎಸ್ ಹುಟ್ಟಿದರೆ, 1950 ರಲ್ಲಿ ಜನಸಂಘ ಹಾಗೂ 1980ರಲ್ಲಿ ಬಿಜೆಪಿ ಜನ್ಮತಾಳಿದೆ. ಮಾತುಮಾತಿಗೂ ದೇಶಭಕ್ತ ಎನ್ನುವ ಮೋದಿ ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ. ಈ ಯಾವ ಗಿರಾಕಿಗಳು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೂ ಮಾಡಿಲ್ಲ. ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಬಿಜೆಪಿ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸಂವಿಧಾನವನ್ನು ದುರ್ಬಲವಾಗಿಸಲು ಪ್ರಯತ್ನ ಮಾಡಿದ್ದಾರೆ. ಜಾತ್ಯತೀತ ತತ್ವವನ್ನು ಹಾಳುಮಾಡುತ್ತಿದ್ದಾರೆ. ಜಾತ್ಯತೀತ ದೇಶದ ಕಲ್ಪನೆಗೆ ಕೊಡಲಿ ಪೆಟ್ಟು ಹಾಕಿದ್ದಾರೆ. ಧರ್ಮ, ಜಾತಿ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನೇರವಾಗಿ ಸುಳ್ಳು ಹೇಳುವ ರಾಜಕಾರಣಿ ಎಂದರೆ ಅದು ಮೋದಿ ಮಾತ್ರ. ಈ
ಮೋದಿಯನ್ನು ನಂಬುವುದು ಹೇಗೆ? ಎಂದು ಅನುಮಾನ ವ್ಯಕ್ತಪಡಿಸಿದರು.

ಎನ್ ಆರ್ ಸಿ ಜಾರಿ ಮಾಡುವುದು ಶತಸಿದ್ಧ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಇಪ್ಪತ್ತು ಸಲ ಹೇಳಿದ್ದಾರೆ. ಆದರೆ ಮೋದಿ ಎನ್ ಆರ್ ಸಿ ಬಗ್ಗೆ ಯೋಚನೆಯೇ ಮಾಡಿಲ್ಲ ಎನ್ನುತ್ತಾರೆ‌. ಹಾಗಾದರೆ ಇವರಲ್ಲಿ ಯಾರನ್ನು ನಂಬಬೇಕು, ಯಾರನ್ನೂ ನಂಬಬಾರದು. ಇವರನ್ನು ಪ್ರಶ್ನೆಯೇ ಮಾಡಬಾರದು ಎಂದ ಮೇಲೆ ಇವರನ್ನು ನಂಬುವುದಾದರೂ ಹೇಗೆ? ಮೋದಿ ಮೇಲೆ ಜನರಿಗೆ ನಂಬಿಕೆಯೇ ಹೊರಟು ಹೋಗಿದೆ. ಪ್ರಧಾನಿ ಏನೇ ತಿಪ್ಪರಲಾಗ ಹಾಕಿದರೂ ಎನ್ ಆರ್ ಸಿ ಜಾರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಳೆದ ಆರು ವರ್ಷಗಳಿಂದ ಬಿಜೆಪಿ ಸುಳ್ಳು ಹೇಳುತ್ತಲೇ ಬರುತ್ತಿದೆ. ಬಿಜೆಪಿಯಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಗರು ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ತಂದು ದೇಶದ ಒಗ್ಗಟ್ಟು ಒಡೆಯುತ್ತಿದ್ದಾರೆ. ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯಿದೆ. ಜನರೇ ಅವರಿಗೆ ಪಾಠವನ್ನು ಕಲಿಸಬೇಕಿದೆ. ಸಂವಿಧಾನ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಸಮಯ ಬಂದಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com