ಮತ್ತೆ ಉರುಳಿದ ಬಂಡಿ: ಬಿಜೆಪಿ ಜೊತೆ ಕೈಜೋಡಿಸಲ್ಲ ಎಂದ 24 ಗಂಟೆಗಳೊಳಗೆ ಯೂಟರ್ನ್ ಹೊಡೆದ ದೇವೇಗೌಡ

ಬಿಜೆಪಿ ಜೊತೆಗೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ಹೇಳಿಕೆ ನೀಡಿದ 24 ಗಂಟೆಗಳೊಳಗೇ ಯೂಟರ್ನ್ ಹೊಡೆದಿರುವ ಜೆಡಿಎಸ್ ವರಿಷ್ಠ ದೇವೇಗೌಡ ಅವರು, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಹಾಗೆಯೇ ಯಾರೂ ಮಿತ್ರರಲ್ಲ ಎಂದು ಹೇಳಿದ್ದಾರೆ. 
ದೇವೇಗೌಡ
ದೇವೇಗೌಡ

ಬೆಂಗಳೂರು: ಬಿಜೆಪಿ ಜೊತೆಗೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ಹೇಳಿಕೆ ನೀಡಿದ 24 ಗಂಟೆಗಳೊಳಗೇ ಯೂಟರ್ನ್ ಹೊಡೆದಿರುವ ಜೆಡಿಎಸ್ ವರಿಷ್ಠ ದೇವೇಗೌಡ ಅವರು, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಹಾಗೆಯೇ ಯಾರೂ ಮಿತ್ರರಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ-ಜೆಡಿಎಸ್ ಹತ್ತಿರವಾಗುತ್ತಿವೆ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ಧರಾಮಯ್ಯ ಎಂದು ಪದೇ ಪದೇ ಹೇಳುತ್ತಿರುವ ನಡುವೆಯೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಮಗೆ ಆಜನ್ಮಶತ್ರುವಲ್ಲ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಹಾಗೆಯೇ ಯಾರೂ ಮಿತ್ರರಲ್ಲ ಎಂದು ದೇವೇಗೌಡ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಿರುವುದಿಲ್ಲ. ರಾಜಕೀಯದಲ್ಲಿ ಯಾರು ಶತ್ರು, ಯಾರು ಮಿತ್ರ? ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಶತ್ರುವೇ? ಸಿದ್ದರಾಮಯ್ಯ ಹಾಗೂ ನಾನು ಸಾಕಷ್ಟು ವಿರೋಧಿಗಳಾಗಿದ್ದೆವು. ಆದರೆ, ಮತ್ತೆ ಒಂದಾಗಲಿಲ್ಲವೇ? ಸಮಯ ಎಲ್ಲವೂ ಬದಲಾಯಿಸುತ್ತದೆ. ಅದು ಶತ್ರು ಅಥವಾ ಮಿತ್ರರೇ ಆದರೂ ಎಲ್ಲವೂ ಒಂದು ಬದಲಾಗುತ್ತದೆ ಎಂದಿದ್ದಾರೆ. 

ಇನ್ನು ಜೆಡಿಎಸ್'ನ ಈ ನಡೆಯನ್ನು ಗಮನಿಸುತ್ತಿರುವ ಪಕ್ಷದ ಕೆಲ ನಾಯಕರು ಬಿಜೆಪಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಈ ನಡುವೆ ದೇವೇಗೌಡ ಹಾಗೂ ಯಡಿಯೂರಪ್ಪ ಅವರು ಈಗಾಗಲೇ ಬೆಂಬಲ ಕುರಿತು ಮಾತುಕತೆ ನಡೆಸಿದ್ದಾರೆಂಬು ಕೆಲ ವರದಿಗಳು ಪ್ರಕಟಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೇವೇಗೌಡ ಅವರು, ಬೇರೆ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಾಯಿತು ಎಂದಿದ್ದಾರೆ. 

ದೇವೇಗೌಡ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದ್ದೇ ಆದರೆ, ಅವರು ಜಾತ್ಯಾತೀತರಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಜೆಡಿಎಸ್ ಕೋಮುವಾದಿಯಾಗಿ ಬದಲಾವಣೆಯಾಗುತ್ತಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com