ನಾನು ಡಿಸಿಎಂ ಆಗಬೇಕೆಂದು ನನ್ನ 60 ಲಕ್ಷ ಜನಪ್ರತಿನಿಧಿಗಳು ಬಯಸುತ್ತಿದ್ದಾರೆ: ಶ್ರೀರಾಮುಲು

ನಾನು 60 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದು, ನನ್ನನ್ನು ಪ್ರೀತಿಸುವ ಈ 60 ಲಕ್ಷ ಜನರು ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ.  
ಶ್ರೀರಾಮುಲು
ಶ್ರೀರಾಮುಲು

ಬೆಂಗಳೂರು: ನಾನು 60 ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದು, ನನ್ನನ್ನು ಪ್ರೀತಿಸುವ ಈ 60 ಲಕ್ಷ ಜನರು ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದ ಸಚಿವರಾಗಿರುವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 


ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪಕ್ಷ ಯಾವ ರೀತಿ ಬದಲಾವಣೆ ಕಂಡಿತು ಮತ್ತು ಪಕ್ಷ ಶಕ್ತಿಶಾಲಿಯಾಗಿದ್ದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 


ರಾಜ್ಯದ ನಾನಾಕಡೆಗಳಲ್ಲಿ ನಮ್ಮ ಸಮುದಾಯದ 60 ಲಕ್ಷ ಜನರಿದ್ದಾರೆ. ನಾನು ಉಪ ಮುಖ್ಯಮಂತ್ರಿಯಾಗಬೇಕೆಂದು ಅವರು ಬಯಸುತ್ತಿದ್ದಾರೆ. ಹೀಗಾಗಿ ನನಗೆ ಆ ಸ್ಥಾನ ಸಿಗದಿದ್ದರೆ ನನ್ನನ್ನು ಪ್ರೀತಿಸುವ ಜನರಿಗೆ ಸಹಜವಾಗಿಯೇ ನೋವಾಗುತ್ತದೆ ಎಂದು ಹೇಳಿದ್ದಾರೆ. 


2009ರಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಅವರಿಗೆ ಈ ಬಾರಿಯೂ ಅದೇ ಸ್ಥಾನವೇ ದೊರಕಿರುವ ಕುರಿತ ಪ್ರಶ್ನಗೆ ಉತ್ತರಿಸಿರುವ ಅವರು, ದೊಡ್ ಸ್ಥಾನ ದೊರಕಿದರೆ ಮತ್ತಷ್ಟು ಉತ್ತಮ ಕೆಲಸ ಮಾಡುತ್ತಿದ್ದೆ ಎಂದು ಆಲೋಚನೆ ಮಾಡುವುದು ಸರಿಯಲ್ಲ. ಈ ರೀತಿಯ ಆಲೋಚನೆ ಸ್ಥಾರ್ಥತೆ ಆಗುತ್ತದೆ. ನಾನು ಸದಾಕಾಲ ಬಡವರ ಪರವಾಗಿ ಆಲೋಚನೆ ಮಾಡುವ ವ್ಯಕ್ತಿಯಾಗಿದ್ದೇನೆ. ಅವರಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಅವರಿಗಾಗಿ ನಾನು ನನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದೇನೆಂದು ಹೇಳಿದ್ದಾರೆ. 


2018ರ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಹಾಗೂ ನಿಮ್ಮನ್ನು ಉಪ ಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ, ನಿಮಗೆ ಆ ಸ್ಥಾನವನ್ನು ನೀಡಲಿಲ್ಲ. ಇದಕ್ಕಾಗಿ ನಿಮ್ಮ ಬೆಂಬಲಿಗಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಪ್ರತಿಭಟಿಸಿದ್ದರು ಈ ಬಗ್ಗೆ ನಿಮ್ಮ ಅಭಿಪ್ರಾಯ? 


ರಾಜ್ಯದಲ್ಲಿ 60 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಮುದಾಯದಿಂದ ನಾನು ಬಂದಿದ್ದೇನೆ. ನನಗೆ ಉನ್ನತ ಸ್ಥಾನ ದೊರಕಿದಿದ್ದಾಗ ಸಹಜವಾಗಿ ಅವರಿಗೆ ನೋವಾಗುತ್ತದೆ. ಅಮಿತ್ ಶಾ ವಿರುದ್ಧ ಪ್ರತಿಭಟಿಸಿದ ಕೆಲ ಬೆಂಬಲಿಗರಿಗೆ ನಾನು ಬೈದಿದ್ದೇನೆ. ಈ ರೀತಿಯ ಪ್ರತಿಭಟನೆಯಿಂದ ನನಗೆ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿಸಿದ್ದೇನೆ. ನಮ್ಮ ಬೆಂಬಲದ ಸಂಖ್ಯೆ ದೊಡ್ಡದಾಗಿದ್ದರೂ ನಮ್ಮ ನಾಯಕನಿಗೆ ಉನ್ನತ ಸ್ಥಾನ ಸಿಗಲಿಲ್ಲ ಎಂಬ ನೋವು ಅವರಿಗಿದೆ ಎಂದು ತಿಳಿಸಿದ್ದಾರೆ. 


10 ವರ್ಷಗಳ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಬಳಿಕ ಯಾವುದಾದರೂ ವ್ಯತ್ಯಾಸಗಳು ಕಂಡು ಬಂದಿದೆಯೇ?

2009ರಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ನಾವು ಅಧಿಕಾರಕ್ಕೆ ಬಂದಿದ್ದೆವು. ಮೈತ್ರಿಯಿಂದ ಅಧಿಕಾರಕ್ಕೆ ಬಂದಾಗ ನನಗೆ ಸರಿಯಾಗಿ ಅನುಭವಗಳಿರಲಿಲ್ಲ. ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. 5 ವರ್ಷಗಳಲ್ಲಿ 3 ಮುಖ್ಯಮಂತ್ರಿಗಳನ್ನು ನೋಡುವಂತಹ ಪರಿಸ್ಥಿತಿ ಎದುರಾಗಿತ್ತು. ಪಕ್ಷದ ಹೈ ಕಮಾಂಡ್'ನಲ್ಲೂ ಕಟ್ಟುನಿಟ್ಟಾದ ನಿಯಮಗಳಿರಲಿಲ್ಲ. ಕಠಿಣ ನಿಲುವುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಇದೀಗ ನಾವು ಬಹುಮತದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಾಕಷ್ಟು ಅನುಭವ ಹೊಂದಿರುವ ನಾಯಕರಿದ್ದಾರೆ. ಪಕ್ಷದ ಹೈಕಮಾಂಡ್ ಕೂಡ ಬಲಿಷ್ಠಗೊಂಡಿದ್ದು, ನಮ್ಮ ಪ್ರತೀಯೊಂದು ನಡವಳಿಕೆಗಳನ್ನು ನೋಡುತ್ತಿದೆ. ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ನಮ್ಮನ್ನು ಸೂಕ್ಷ್ಮದಿಂದ ನೋಡುತ್ತಿದ್ದಾರೆ. ಹೀಗಾಗಿ ಪಕ್ಷದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಗಳು ನಡೆಯಲು ಸಾಧ್ಯವಿಲ್ಲ. ಪಕ್ಷದ ವರ್ಚಸ್ಸು ಕಾಪಾಡುವಂತೆ ಅಮಿತ್ ಶಾ ಸೂಚಿಸಿದ್ದಾರೆಂದಿದ್ದಾರೆ. 


ಬಿಜೆಪಿ ಸರ್ಕಾರ ಕೆಲವೇ ತಿಂಗಳು ಮಾತ್ರ ಅಧಿಕಾರ ನಡೆಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಸಿದ್ದರಾಮಯ್ಯ ತಿಳಿದಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 78 ಸ್ಥಾನಗಳನ್ನಷ್ಟೇ ಗೆದ್ದಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡಿದ್ದಾರೆ. ಇಂದಿರಾ ಕ್ಯಾಂಟೀನ್, ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಸಿದ್ದರಾಮಯ್ಯ ತಂದಿದ್ದಾರೆ. ಆದರೂ ತಮ್ಮ ದುರ್ವರ್ತನೆಯಿಂದ ಸಿದ್ದರಾಮಯ್ಯ ಸೋಲು ಕಂಡಿದ್ದಾರೆ. 


ಬಾದಾಮಿಯಲ್ಲಿಯೂ ನನ್ನ ವಿರುದ್ಧ ಕೇವಲ 1,600 ಮತಗಳಿಂದ ಗೆದ್ದಿದ್ದಾರೆ. ಚುನಾವಣೆ ವೇಳೆ ಮತಯಾಚನೆ ಮಾಡಲು ರಾಜ್ಯದ ಹಲವು ಕ್ಷೇತ್ರಗಳಿಗೆ ನಾನು ಭೇಟಿ ನೀಡಿದ್ದೆ. ಹೀಗಾಗಿ ಬಾದಾಮಿ ಕ್ಷೇತ್ರದತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಗಮನ ಹರಿಸಿದ್ದೇ ಆಗಿದ್ದರೆ, ಸಿದ್ದರಾಮಯ್ಯ ಅವರು ಶಾಸಕರಾಗುತ್ತಿರಲಿಲ್ಲ. ಅವರದ್ದೇ ಪಕ್ಷವೇ ಸೋಲಿಗೆ ಅವರನ್ನು ಹೊಣೆ ಮಾಡಿದೆ. 


17 ಭಿನ್ನಮತೀಯರಿಂದ ಪಕ್ಷ ಸಂಕಷ್ಟವನ್ನು ಅನುಭವಿಸಲಿದೆಯೇ? 
ಉಪ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಪರವಾಗಿರುವ 17 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ನಮ್ಮನ್ನು ಬೆಂಬಲಿಸಿರುವ ಭಿನ್ನಮತೀಯರಿಗೆ ನ್ಯಾಯ ದೊರಕಲಿದೆ. 


ಸಚಿವರನ್ನು ನೇಮಕ ಹಾಗೂ ಖಾತೆ ಹಂಚಿಕೆಯಲ್ಲಿ ವಿಳಂಬವೇಕೆ? 
ನಮ್ಮದು ಸ್ಥಳೀಯ ಪಕ್ಷವಲ್ಲ. ಪ್ರತೀಯೊಂದನ್ನು ರಾಜ್ಯದಲ್ಲಿಯೇ ನಿಂತು ನಿರ್ಧಾರ ಮಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿಯೇ ಎಲ್ಲವನ್ನೂ ಮಾಡಬೇಕಿದೆ. 


ಮೂವರು ಉಪ ಮುಖ್ಯಮಂತ್ರಿಗಳ ಅಗತ್ಯವಿದೆಯೇ? 
ಇದು ಪಕ್ಷದ ನಿರ್ಧಾರವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಪಕ್ಷ ನಾಳೆ ಮತ್ತಷ್ಟು ಜನರನ್ನೂ ನೇಮಕ ಮಾಡಬಹುದು. ಇದಕ್ಕೆ ಸಂವಿಧಾನದಲ್ಲಿ ಯಾವುದೇ ರೀತಿಯ ಅಡೆತಡೆಗಳಿಲ್ಲ. 


ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ನಿಮ್ಮ ಹಿರಿತನಕ್ಕೆ ಧಕ್ಕೆಯುಂಟಾಗುತ್ತದೆಯೇ? 
ಇದು ಪಕ್ಷದ ನಿರ್ಧಾರಕ್ಕೆ ಸಂಬಂಧಿಸಿದ್ದು. ನಾವೆಲ್ಲರೂ ಒಂದು ಕುಟುಂಬದಂತಿದ್ದೇವೆ. ಕೇಂದ್ರೀಯ ನಾಯಕರ ನಿರ್ಧಾರವೇ ಅಂತಿಮ. ಕೇಂದ್ರೀಯ ನಾಯಕರ ನಿರ್ಧಾರ ಪಕ್ಷದ ಉತ್ತಮತೆಗೆ ಆಗಿರುತ್ತದೆ. 


ನೀವು ಮುಖ್ಯಮಂತ್ರಿಯಾಗುವ ಅವಕಾಶಗಳೇನಾದರೂ ಇದೆಯೇ? 
ಇದನ್ನು ನಾನು ನಿರೀಕ್ಷಿಸಿಲ್ಲ. ನನ್ನ ಹಣೆಬರಹದಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಕಾಲವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com