ಗೋಹತ್ಯೆ ಮಸೂದೆ ತರಾತುರಿಯಲ್ಲಿ ಮಂಡನೆ: ಸ್ಪಷ್ಟನೆ ನೀಡಿದ ಜೆ.ಸಿ. ಮಾಧುಸ್ವಾಮಿ

ವಿಧಾನಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಅಲ್ಲಿ ಈ ಮಸೂದೆಯನ್ನು ಮಂಡಿಸಬೇಕಾಗಿದ್ದುದರಿಂದ ನಿನ್ನೆ ವಿಧಾನಸಭೆಯಲ್ಲಿ ಸ್ವಲ್ಪ ತರಾತುರಿಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಅದನ್ನು ಬಿಟ್ಟು ಮತ್ತೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜೆ. ಸಿ. ಮಾಧುಸ್ವಾಮಿ
ಜೆ. ಸಿ. ಮಾಧುಸ್ವಾಮಿ

ಬೆಂಗಳೂರು: ಗೋ ಹತ್ಯೆ ನಿಷೇಧ ವಿಧೇಯಕ ಪ್ರಸಕ್ತ ಅಧಿವೇಶನದಲ್ಲೇ ಅಂಗೀಕರಿಸಬೇಕಾಗಿತ್ತು. ವಿಧಾನಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಮೊದಲು ಅಲ್ಲಿ ಈ ಮಸೂದೆಯನ್ನು ಮಂಡಿಸಬೇಕಾಗಿದ್ದುದರಿಂದ ನಿನ್ನೆ ವಿಧಾನಸಭೆಯಲ್ಲಿ ಸ್ವಲ್ಪ ತರಾತುರಿಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಅದನ್ನು ಬಿಟ್ಟು ಮತ್ತೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯ ಕೊನೆಯ ದಿನದ ಕಲಾಪದ ಆರಂಭದಲ್ಲಿ ಮಾತನಾಡಿದ ಅವರು, ಪರಿಷತ್ ಸಲಹಾ ಸಮಿತಿ ಸಭೆಗೆ ಹೋದಾಗ
ವಿರೋಧ ಪಕ್ಷದ ನಾಯಕರು ಮಾಡಿದ ಹಠ ನೋಡಿದಾಗ ಯಾವುದೇ ಮಸೂದೆ ಅಂಗೀಕಾರವಾಗುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ 
ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಆದಷ್ಟು ಬೇಗ ಅಂಗೀಕಾರ ಮಾಡುವ ಅನೀವಾರ್ಯವಿತ್ತು. ವಿಪಕ್ಷ 
ನಾಯಕರಿಗೆ  ಅವಮಾನ ಮಾಡುವ ದುರುದ್ದೇಶವಿರಲಿಲ್ಲ. ಪರಿಷತ್ ಅನಿರ್ದಿಷ್ಟಾವಧಿಗೆ ಮುಂದೂಡುವ ಆತಂಕವಿದ್ದುದರಿಂದ ವಿಧಾನಸಭೆಯಲ್ಲಿ ಬೇಗ ಮಂಡಿಸವಂತೆ ಸ್ಪೀಕರ್ ಗೆ ಮನವಿ ಮಾಡಿದ್ದೇವು ಎಂದು ಸ್ಪಷ್ಟಪಡಿಸಿದರು.

ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಹಳ ಗೌರವಿಸುವವರು, ಮಸೂದೆ ಓದಲು, ಅಧ್ಯಯನ ಮಾಡಲು ಪ್ರತಿಪಕ್ಷದವರಿಗೆ ಅವಕಾಶ ನೀಡಬೇಕಾಗಿತ್ತು. ಸಭೆಯಲ್ಲಿ ಪಾಸಾದ ಬಿಲ್ ಗಳು ಪರಿಷತ್ ನಲ್ಲಿ ಬಾಕಿ ಉಳಿಯುವಂತಾಗಿತ್ತು. ರಾಜ್ಯ ಪಾಲರು ಕೂಡಾ ಹಲವು ಬಾರಿ ತಮಗೆ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಚುನಾಯಿತ ಸದನವಾದ ವಿಧಾನಸಭೆಯಲ್ಲಿ ಪಾಸಾದ ಬಿಲ್ ಪರಿಷತ್ ನಲ್ಲಿ ತಡೆಹಿಡಿದರೆ ಸರ್ಕಾರದ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ನಿನ್ನೆ ಅನಿವಾರ್ಯವಾಗಿ ಗೋ ಹತ್ಯೆ ನಿಷೇಧವನ್ನು ಪರ್ಯಾಯಲೋಚಿಸಿ ಅಂಗೀಕಾರಗೊಳಿಸುವ ಅನಿವಾರ್ಯವಿತ್ತು. ಅದನ್ನು ಬಿಟ್ಟು ಕದ್ದುಮುಚ್ಚಿ ಮಾಡುವ
ಉದ್ದೇಶವಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು.

ವಿಪಕ್ಷ ಸದಸ್ಯರು ಅನ್ಯಥಾ ಭಾವಿಸದೆ ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಪಿತೂರಿಯಾಗಲೀ, ದುರುದ್ದೇಶವಾಗಲೀ ಇರಲಿಲ್ಲ ಎಂದು ಜೆ.ಸಿ.ಮಾಧುಸ್ವಾಮಿ ಮನವಿ ಮಾಡಿದರು.

ಇದಕ್ಕೂ ಮೊದಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗೋಹತ್ಯೆ ನಿಷೇಧದ ಕಾಯಿದೆ ವಿಷಯದಲ್ಲಿ ಮಾತನಾಡುವಾಗ ತಮಗೆ ಸಂಬಂಧಪಟ್ಟ ವಿಷಯವನ್ನು ವಿರೋಧ ಪಕ್ಷದ ನಾಯಕರು ಸದನದ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸಿದ್ದಾರೆ. ಕಲಾಪ ಸಮಿತಿ ಸಭೆಯಲ್ಲಿ ಸುಗ್ರೀವಾಜ್ಞೆ ಅಥವಾ ಮಹತ್ವದ ಮಸೂದೆಗಳಿದ್ದರೆ ಮಂಡಿಸುವುದಾಗಿ ಚರ್ಚಿಸಲಾಗಿತ್ತು. ಸದನದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ, ಮಹತ್ವದ ಮಸೂದೆಗಳಿದ್ದರೆ ಅದನ್ನೂ ಪಾಸ್ ಮಾಡಲು ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಹೇಳಿದ್ದೆ. ಅದರಂತೆ ಸರ್ಕಾರ ಮಹತ್ವದ ಮಸೂದೆ ಇದೆ ಎಂದು ಹೇಳಿದ್ದರಿಂದ ಸಪ್ಲಿಮೆಂಟರಿ ಅಜೆಂಡಾದಲ್ಲಿ ಗೋ ಹತ್ಯೆ ವಿಷಯವನ್ನು ಸೇರಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷದ ನಾಯಕರು ತಮಗೆ ಚರ್ಚೆಗೆ ಅವಕಾಶವನ್ನೇ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಪ್ರತಿಪಕ್ಷ ನಾಯಕರು ಧರಣಿಯಲ್ಲಿದ್ದರು. ತಾವು ಚರ್ಚೆಗೆ ಅವಕಾಶ ನೀಡಿದ್ದು, ಅವರು ಭಾಗವಹಿಸಿಲ್ಲ ಎಂದು ಸ್ಪೀಕರ್ ಸಮಾಜಾಯಿಷಿ ನೀಡಿದರು.

ಸಭಾಧ್ಯಕ್ಷ ಸ್ಥಾನ ನಿಯಮಗಳ ಚೌಕಟ್ಟಿನಲ್ಲಿಯೇ ನಡೆಸಬೇಕಾಗುತ್ತದೆ. ನಿನ್ನೆಯ ವಿಷಯದಲ್ಲಿಯೂ ನಿಯಮಗಳ ಪ್ರಕಾರವೇ ನಡೆಸಲಾಗಿದೆ. ಪ್ರತಿಪಕ್ಷ ನಾಯಕರು ಸದನಕ್ಕೆ ಬಂದು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದರು.

ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ನಿನ್ನೆ ಸ್ಪೀಕರ್ ತೆಗೆದುಕೊಂಡ ತೀರ್ಮಾನ ಸರಿಯಾಗಿದೆ. ಕಾಂಗ್ರೆಸ್ ಶಾಸಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಈ ಹಿಂದೆ ಇದೇ ಸಭೆಯಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ನಾವು ನೋಡಿದ್ದೇವೆ. ಹಿಂದೆ ಗೋಹತ್ಯೆ ನಿಷೇಧ ಮಸೂದೆ ವಿಧಾನಮಂಡಲದಲ್ಲಿ ಅಂಗೀಕಾರಗೊಂಡು ರಾಜ್ಯಭವನಕ್ಕೆ ಕಳುಹಿಸಿದಾಗ, ಅಲ್ಲಿಗೆ ತೆರಳಿ ರಾಜ್ಯಪಾಲರ ಮೇಲೆ ಒತ್ತಡ ಹಾಕಿ ಅದನ್ನು ತಡೆಹಿಡಿದ ಘಟನೆಯೂ ನಡೆದಿದೆ. ಆಗ ಪ್ರಜಾಪ್ರಭುತ್ವ ನೆನಪಿಗೆ ಬರಲಿಲ್ಲವೇ ? ಉಭಯ ಸದನಗಳಲ್ಲಿ ಪಾಸ್ ಆದ ಮಸೂದೆಯನ್ನು ಏಕಾಏಕಿ ರಾಜ್ಯಭವನದಲ್ಲಿ ತಡೆ ಹಿಡಿದಿದ್ದರು ಎಂದು ಟೀಕಿಸಿದರು.

ಗೋ ಹತ್ಯೆ ನಿಷೇಧ ಕಾಯಿದೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಇದ್ದ ಅಂಶವಾಗಿತ್ತು. ಇದನ್ನು ಕದ್ದುಮುಚ್ಚಿ ಮಾಡಿಲ್ಲ. ತಮ್ಮ ಮೂಗಿನ ನೇರಕ್ಕೆ ಚರ್ಚೆಯಾಗಬೇಕು, ಇದೇ ರೀತಿ ಸದನ ನಡೆಯಬೇಕು ಎಂಬುದು ಕಾಂಗ್ರೆಸ್ ನೀತಿಯಾಗಿದೆ. ಸದನ ಹೀಗೆ ನಡೆಯಬೇಕು ಎಂದು ನಿರ್ದೇಶನ ಕೊಡುವ ಅಧಿಕಾರ ಅವರಿಗೆ ಇಲ್ಲ, ಕಳೆದ 15-20 ವರ್ಷಗಳಲ್ಲಿ ಕಾಂಗ್ರೆಸ್ ನವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಬೆಂಗಳೂರಿಗೆ ಸಂಬಂಧಿಸಿದ ಕಾಯ್ದೆಗೆ ಅನುಮೋದನೆ ನೀಡಬೇಕಾಗಿರುವುದರಿಂದ ಸ್ಪೀಕರ್ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮತ್ತೆ ಸ್ಪೀಕರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಅವುಗಳ ಮಧ್ಯೆಯೇ ಸದನದ ವ್ಯವಸ್ಥೆಯನ್ನು ಎಲ್ಲರೂ ಒಟ್ಟಾಗಿ ನಡೆಸಿಕೊಂಡು ಹೋಗಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಜನರ ಎದುರಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆಯೇ ಹೊರತು ಸದನದ ಕಲಾಪ ಬಹಿಷ್ಕಾರ, ಅದರಿಂದ ಹೊರಗಿಡುವುದು ಸರಿಯಲ್ಲ, ವಿಪಕ್ಷದೊಂದಿಗೆ ಮಾತುಕತೆ ನಡೆಸಲು ಕಲಾಪವನ್ನು 10 ನಿಮಿಷ ಮುಂದೂಡಲಾಗುವುದು ಎಂದು ಕಲಾಪವನ್ನು ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com