ಪ್ರವಾಹ ಪರಿಹಾರ ಸಂಬಂಧ ರಾಜ್ಯಸರ್ಕಾರ ಶ್ವೇತ ಪತ್ರ ಹೊರಡಿಸಲು ಈಶ್ವರ್ ಖಂಡ್ರೆ ಆಗ್ರಹ

ಕಳೆದ ವರ್ಷ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಬಂದು ಹಾನಿಗೊಳಗಾಗಿತ್ತು. ಈ ವರ್ಷ ಪ್ರವಾಹ ಮತ್ತೆ ಪುನರಾವರ್ತನೆಯಾಗುತ್ತಿದ್ದರೂ  ಕೇಂದ್ರ ಮತ್ತು ರಾಜ್ಯ ಸರ್ಕಾರ ರಕ್ಷಣೆ ಹಾಗೂ ಪರಿಹಾರ ನೀಡುವಲ್ಲಿ ವಿಫಲವಾಗಿವೆ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ

ಬೆಂಗಳೂರು: ಕಳೆದ ವರ್ಷ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹ ಬಂದು ಹಾನಿಗೊಳಗಾಗಿತ್ತು. ಈ ವರ್ಷ ಪ್ರವಾಹ ಮತ್ತೆ ಪುನರಾವರ್ತನೆಯಾಗುತ್ತಿದ್ದರೂ  ಕೇಂದ್ರ ಮತ್ತು ರಾಜ್ಯ ಸರ್ಕಾರ ರಕ್ಷಣೆ ಹಾಗೂ ಪರಿಹಾರ ನೀಡುವಲ್ಲಿ ವಿಫಲವಾಗಿವೆ ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ 885 ಹಳ್ಳಿ, 56 ತಾಲೂಕು ನೆರೆಗೆ ಸಿಲುಕಿವೆ. 33 ಸಾವಿರ ಮನೆಗಳಿಗೆ  ಹಾನಿಯಾಗಿದ್ದು, 80 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. 3500 ಕಿ.ಮಿ ರಸ್ತೆ, 393 ಕಟ್ಟಡಗಳು, 250, ಸೇತುವೆ 104 ಸಣ್ಣ ನಿರಾವರಿ ಕೆರೆಗಳು ಹಾಳಾಗಿವೆ. ಎಲೆಕ್ಟ್ರಿಕಲ್ ಟ್ರಾನ್ಸ್ ಫಾರ್ಮರ್ ಕೆಟ್ಟುಹೋಗಿದೆ.

ಕಳೆದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಂತ ಹೇಳಿದ್ದರು. ಈಗ ಏನು ಕೆಲಸ ಮಾಡಿದ್ದಾರೆ. ಕಳೆದ ವರ್ಷ 20 ಲಕ್ಷ ಎಕರೆ ಬೆಳೆ ಹಾನಿಯಾಗಿತ್ತು. ಲಕ್ಷಾಂತರ ಮನೆಗಳು ಹಾನಿಗೊಳಗಾಗಿದ್ದವು. ಕಳೆದ ವರ್ಷದ ಹಾನಿಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಕೇಂದ್ರ ಸರ್ಕಾರ ಎಸ್ ಡಿಆರ್ ಎಫ್ ನಿಧಿಯಿಂದ 1800 ಕೋಟಿ ಬಿಡುಗಡೆ ಮಾಡಿದ್ದಾರೆ.  ಕಳೆದ ವರ್ಷ 1 ಲಕ್ಷ ಕೋಟಿ ನಷ್ಟ ಸಂಭವಿಸಿತ್ತು. ಈ ವರ್ಷ 10 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ. ಆದರೆ, ಬಿಜೆಪಿಯ 25 ಸಂಸದರು ಇದುವರೆಗೂ ಕೇಂದ್ರದ ಮುಂದೆ ರಾಜ್ಯಕ್ಕೆ ಅನುದಾನ ತರಲು ಧ್ವನಿ ಎತ್ತಿಲ್ಲ.

ಜಿಎಸ್ ಟಿ ಬಾಕಿ ಹಣ ಬಂದಿಲ್ಲ. ಕೋವಿಡ್ ಪರಿಹಾರವಾಗಿ ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಲ್ಲ. ಗುಜರಾತ್, ಬಿಹಾರ್ ರಾಜ್ಯಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತಾರೆ. ಕರ್ನಾಟಕಕ್ಕೆ ಮಾತ್ರ ನಿರಂತರ ಅನ್ಯಾಯ ಮಾಡುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮಂತ್ರಿಗಳು ಪ್ರಧಾನಿ.ಜೊತೆಗಿನ ಸಂವಾದದಲ್ಲಿ ಖಜಾನೆಯಲ್ಲಿ ಹಣ ಇದೆ ಎಂದು ಹೇಳುತ್ತಾರೆ. ಸಿಎಂ ಖಜಾನೆ ಖಾಲಿ ಇದೆ,  ಕೇಂದ್ರದಿಂದ ನೆರವು ಕೇಳುತ್ತೇವೆ ಎನ್ನುತ್ತಾರೆ. ಗೃಹ ಸಚಿವರೇ ಪರಿಹಾರ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ಹೇಳಿದ್ದಾರೆ.

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ ತಕ್ಷಣ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡುವಂತೆ ಒತ್ತಡ ಹೇರಬೇಕು. ರಾಜ್ಯದ ಸಂಸದರು ಅಂಜುಬುರುಕ ಸಂಸದರು ಇದ್ದಾರೆ. ಇವರನ್ನು ಆಯ್ಕೆ ಮಾಡಿ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಅವರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಅವರನ್ನು ರಾಜ್ಯದಿಂದ ಆಯ್ಕೆ ಮಾಡಬೇಕಾ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com