ಪರಿಷತ್ ಉಪ ಚುನಾವಣೆ: ಡಿಸಿಎಂ ಸವದಿಗೆ ಸುಲಭ ಗೆಲುವು!

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಿರೀಕ್ಷೆಯಂತೆ ಮೇಲ್ಮನೆ ಉಪಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿದ್ದು, ಈ ಮೂಲಕ ತಮ್ಮ ಡಿಸಿಎಂ ಹುದ್ದೆಯನ್ನು ಭದ್ರಪಡಿಸಿಕೊಂಡಿದ್ದಾರೆ.

Published: 17th February 2020 07:08 PM  |   Last Updated: 17th February 2020 07:08 PM   |  A+A-


Laxman_Savadi1

ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ

Posted By : Nagaraja AB
Source : UNI

ಬೆಂಗಳೂರು: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಿರೀಕ್ಷೆಯಂತೆ ಮೇಲ್ಮನೆ ಉಪಚುನಾವಣೆಯಲ್ಲಿ ಅನಾಯಾಸವಾಗಿ ಗೆಲುವು ಸಾಧಿಸಿದ್ದು, ಈ ಮೂಲಕ ತಮ್ಮ ಡಿಸಿಎಂ ಹುದ್ದೆಯನ್ನು ಭದ್ರಪಡಿಸಿಕೊಂಡಿದ್ದಾರೆ. ಹಲವು ನಾಟಕೀಯ ತಿರುವುಗಳ ನಡುವೆಯೂ ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸವದಿ ಗೆಲುವಿನ ನಗೆ ಬೀರಿದ್ದಾರೆ

ಒಂದು ಸ್ಥಾನಕ್ಕೆ ನಡೆದ  ಪರಿಷತ್ ಉಪಚುನಾವಣೆಯಲ್ಲಿ ಸವದಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ನ ರಿಜ್ವಾಜ್ ಅರ್ಷದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ನ ಒಂದು ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಹಾದಿ ಸುಗಮವಾಗಿತ್ತು

ಬೆಳಗ್ಗೆ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು. ಬೆಳಗ್ಗೆಯಿಂದ ಬಿಜೆಪಿ ಶಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ಉಪಚುನಾವಣೆಯಲ್ಲಿ ಒಟ್ಟು 120 ಮಂದಿ ಶಾಸಕರು ಮತ ಚಲಾವಣೆ ಮಾಡಿದರು. ಬಿಜೆಪಿಯ ಅನಾರೋಗ್ಯಪೀಡಿತ ರಾಮದಾಸ್ ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಮತದಾನ ಮಾಡಿದರು

ಏಳು ಅಸಿಂಧು ಮತ: ಒಟ್ಟು 120 ಶಾಸಕರು ಮತದಾನ ಮಾಡಿದ್ದು, ಈ ಪೈಕಿ 7 ಶಾಸಕರ ಮತ ಅಸಿಂಧುವಾಗಿದೆ.
ಆ ಮೂಲಕ 113 ಮತಗಳಿಂದ ಡಿಸಿಎಂ ಸವದಿ ಅನಾಯಾಸ ಗೆಲುವು ಸಾಧಿಸಿದ್ದಾರೆ ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಬಳಿಕ ನಿವೃತ್ತಿ ಘೋಷಿಸಿದ್ದ ಅನಿಲ್ ಕುಮಾರ್ ಗೆ ಯಾವುದೇ ಮತಚಲಾವಣೆ ಆಗಿಲ್ಲ

ಜೆಡಿಎಸ್ ಶಾಸಕ ಜಿಟಿಡಿ ಮತದಾನ
ಅನಿರೀಕ್ಷಿತ ಬೆಳವಣಿಗೆ ಎಂಬಂತೆ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಮತಚಲಾವಣೆ ಮಾಡಿರುವುದು ಕುತೂಹಲಕ್ಕೆ ಕಾರಣವಾಯಿತು.ಜೆಡಿಎಸ್ ನ ಅತೃಪ್ತ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಿಂದಲೂ ದೂರ ಉಳಿದಿದ್ದರು. ಅವರು ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು. ಸಚಿವ ಸಿ.ಟಿ.ರವಿ ಅವರು ಜಿ.ಟಿ.ದೇವೇಗೌಡರನ್ನು ಮತಗಟ್ಟೆ ಕಡೆಗೆ ಕೈ ಹಿಡಿದು ಕರೆದುಕೊಂಡು ಬಂದರು. ಆಗ ಲಕ್ಷ್ಮಣ ಸವದಿ, ಜಿ.ಟಿ.ದೇವೇಗೌಡರ ಕೈ ಕುಲುಕಿದರು. ಬಳಿಕ ಜಿಟಿಡಿ ಮತಚಲಾವಣೆ ಮಾಡಿದರು

ಉಳಿದಂತೆ ಪಕ್ಷೇತರ ಶಾಸಕರಾದ ಎನ್.ಮಹೇಶ್,ನಾಗೇಶ್, ಶರತ್ ಬಚ್ಚೇಗೌಡ ಅವರು ಮತಚಲಾವಣೆ ಮಾಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಮತದಾನದಿಂದ ದೂರ ಉಳಿದ್ದರು.

ಸವದಿ ಅಭಿನಂದನೆ: ಗೆಲುವಿನ ಬಳಿಕ ಡಿಸಿಎಂ ಸವದಿ ತಮ್ಮನ್ನು ಆಯ್ಕೆ ಮಾಡಿದ ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಅವಿರೋಧ ಆಯ್ಕೆ ಆಗಬೇಕಿತ್ತು. ಆದರೆ ಪಕ್ಷೇತರ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸಾಧ್ಯವಾಗಲಿಲ್ಲ. ಕೊನೆ ಘಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಕಣದಿಂದ ಹಿಂದೆ ಸರಿದರು. ಅವರನ್ನು ಮನವೊಲಿಸಿದ ಪಕ್ಷದ ನಾಯಕರಿಗೂ ಧನ್ಯವಾದ ಹೇಳುತ್ತೇನೆ ಎಂದರು.

ಜಿ.ಟಿ. ದೇವೇಗೌಡರಿಗೆ ಶಾಸಕಾಂಗ ಸಭೆಯ ನಿರ್ಧಾರ ಗೊತ್ತಿರಲಿಲ್ಲ ಅನ್ನಿಸುತ್ತದೆ. ಹೀಗಾಗಿ ಮತ ಹಾಕಿದ್ದು, ಅವರು ಯಾರಿಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಅವರು ನನಗೆ ಮತ ಹಾಕಿದ್ದಾರೆ ಅಂತ ಭಾವಿಸುತ್ತೇನೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Stay up to date on all the latest ರಾಜಕೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp