ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು: ದೆಹಲಿಗೆ ತೆರಳಿದ ಡಿಕೆಶಿ

ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಒಂದು ತಿಂಗಳಿನಿಂದ ಪ್ರಯತ್ನ ನಡೆಸುತ್ತಿರುವ  ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ನಿನ್ನೆ  ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಒಂದು ತಿಂಗಳಿನಿಂದ ಪ್ರಯತ್ನ ನಡೆಸುತ್ತಿರುವ  ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ನಿನ್ನೆ  ಸಂಜೆ ದೆಹಲಿಗೆ ಪ್ರಯಾಣ ಬೆಳೆಸಿದರು.

ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ದೆಹಲಿಗೆ ಭೇಟಿ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಡಿಕೆಶಿ ಮುಂಚೂಣಿಯಲ್ಲಿರುವುದು  ಸ್ಪಷ್ಟವಾಗಿದೆ. ಆದರೆ, ಅದು ಅಂದುಕೊಂಡಷ್ಟು ಸುಲಭವಾಗಿಲ್ಲ. 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಹಿಮ್ಮೆಟ್ಟಿಸುವುದು ಡಿಕೆಶಿಯ ಮೊದಲ ಸವಾಲು ಆಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಿದ್ದರಾಮಯ್ಯ ಅವರ ನಿವಾಸಕ್ಕೂ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ

ಮೊದಲಿನಿಂದಲೂ ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಅಷ್ಟೇನೂ ಸಂಬಂಧ ಸರಿಯಾಗಿಲ್ಲ. 2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ  ಸುಮಾರು ಆರು ತಿಂಗಳ ಕಾಲ ಡಿಕೆಶಿಗೆ ಯಾವುದೇ ಸಚಿವ ಸ್ಥಾನ ನೀಡಿರಲಿಲ್ಲ. ಇತ್ತೀಚಿಗೆ ಡಿಕೆಶಿ ಇಡಿ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲೂ ಸಿದ್ದರಾಮಯ್ಯ ಕಾಣಿಸಿಕೊಂಡಿರಲಿಲ್ಲ

ಡಿಕೆ ಶಿವಕುಮಾರ್  ಅವರಿಗೆ ಸಿದ್ದರಾಮಯ್ಯ ಅವರ ಬೆಂಬಲ ಅಗತ್ಯವಾಗಿದೆ. ಏಕೆಂದರೆ ಸಿದ್ದರಾಮಯ್ಯ ಅವರ ಬೆಂಬಲಿಗ , ಲಿಂಗಾಯಿತ ಸಮುದಾಯದ ಪ್ರಭಾವಿ ಮುಖಂಡ ಎಂಬಿ ಪಾಟೀಲ್ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ. ಯಾರೇ ಆ ಸ್ಥಾನ ಪಡೆಯಬೇಕಾದರೂ ಸಿದ್ದರಾಮಯ್ಯ  ಅವರ ಆಶೀರ್ವಾದ ಬೇಕೇ ಬೇಕು. ರಾಮಲಿಂಗಾರೆಡ್ಡಿ ಹೆಸರು ಕೂಡಾ ಈ ಸ್ಥಾನಕ್ಕಾಗಿ ಕೇಳಿಬರುತ್ತಿದೆ. 

ಸಿದ್ದರಾಮಯ್ಯ ಅವರ ಮತ್ತೊಬ್ಬ ಬೆಂಬಲಿಗ ಸತೀಶ್ ಜಾರಕಿಹೊಳಿ ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇತ್ತೀಚಿಗೆ ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟು, ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com