ಕೃಷಿ ಮಸೂದೆ ಬಗ್ಗೆ ರೈತರ ಆತಂಕ ಸಹಜ, ಸರ್ಕಾರ ಅದನ್ನು ನಿವಾರಿಸಬೇಕು: ಹೆಚ್ ಡಿ ದೇವೇಗೌಡ

ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳ ರೈತರು ಪ್ರತಿಭಟನೆಯನ್ನು ಮುಂದುವರಿಸಿರುವುದರ ಮಧ್ಯೆ, ಇದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ರೈತರ ಆತಂಕ ಸಹಜ, ಇದೀಗ ಸರ್ಕಾರ ಮಸೂದೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟು ರೈತರ ಸಂದೇಹ, ಆತಂಕಗಳನ್ನು ನಿವಾರಿಸಬೇಕು ಎಂದು ಹೇ
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳ ರೈತರು ಪ್ರತಿಭಟನೆಯನ್ನು ಮುಂದುವರಿಸಿರುವುದರ ಮಧ್ಯೆ, ಇದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ರೈತರ ಆತಂಕ ಸಹಜ, ಇದೀಗ ಸರ್ಕಾರ ಮಸೂದೆ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟು ರೈತರ ಸಂದೇಹ, ಆತಂಕಗಳನ್ನು ನಿವಾರಿಸಬೇಕು ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ತರಾತುರಿಯಿಂದ ಕೃಷಿ ಮಸೂದೆಯನ್ನು ಅಂಗೀಕರಿಸುವ ಅವಸರ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿರುವ ಅವರು ಈ ಬಗ್ಗೆ ಚರ್ಚೆ ನಡೆಸಲು ಎರಡು ತಿಂಗಳವರೆಗೆ ಕಾಯುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೆ ಎಂದಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿರುವುದರ ಆಯ್ದ ಭಾಗ ಇಲ್ಲಿದೆ:

ಕೃಷಿ ಮಸೂದೆ ಬಗ್ಗೆ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರಿಂದ ರೈತರಿಗೆ ಪ್ರಯೋಜನವಾಗಲಿದೆ ಎಂದು ಹೇಳುತ್ತಿವೆ, ಈ ಬಗ್ಗೆ ಏನು ಹೇಳುತ್ತೀರಿ?
-ಮಸೂದೆ ಅನುಮೋದನೆಗೊಂಡ ನಂತರ ಪ್ರಧಾನ ಮಂತ್ರಿ ಎರಡು ಪ್ರಮುಖ ಹೇಳಿಕೆಗಳನ್ನು ನೀಡಿದರು. ಅವುಗಳು, ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರಿಸುವುದು ಮತ್ತು ಎಪಿಎಂಸಿ ಮಸೂದೆ ಅನುಮೋದನೆಗೊಂಡ ನಂತರ ರಾಜ್ಯಗಳಲ್ಲಿರುವ ಮಾರುಕಟ್ಟೆಗಳು ಮುಚ್ಚುವುದಿಲ್ಲ ಎಂದು. ಮಸೂದೆಯಿಂದ ರೈತರ ಮೇಲೆ ಆಗುತ್ತಿರುವ ದೌರ್ಜನ್ಯಗಳು ನಿಲ್ಲುತ್ತವೆ ಮತ್ತು ಹಣ ನೇರವಾಗಿ ರೈತರ ಖಾತೆಗೆ ಹೋಗುತ್ತದೆ ಎಂಬುದು. ಸರ್ಕಾರದ ಉದ್ದೇಶ ಜನರಿಗೆ ಅರ್ಥವಾಗುವವರೆಗೆ ಕಾಯ್ದೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು.

ನಮ್ಮ ರಾಜ್ಯದಲ್ಲಿ ಭೂ ಸುಧಾರಣೆ, ಎಪಿಎಂಸಿ ಮತ್ತು ಕೈಗಾರಿಕೆ ವಿವಾದಗಳ ಕಾಯ್ದೆಗಳಿಗೆ ಸಂಬಂಧಪಟ್ಟಂತೆ ಸಿಎಂ ಯಡಿಯೂರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿ ತಂದ ಸಂದರ್ಭದಲ್ಲಿ ನಾನು ನನ್ನ ಪಕ್ಷದ ನಾಯಕರೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಸರ್ಕಾರದ ನಡೆಯನ್ನು ವಿರೋಧಿಸಿ ಸಿಎಂಗೆ ಪತ್ರ ಬರೆದೆ. ಅದಕ್ಕೆ ಅವರು ಪ್ರತಿಕ್ರಿಯೆ ನೀಡಲಿಲ್ಲ, ಆ ವಿಷಯವನ್ನು ಇಲ್ಲಿ ಈಗ ಚರ್ಚೆ ಮಾಡುವುದು ಬೇಡ.

ತೀವ್ರ ವಿರೋಧ, ಗದ್ದಲ, ಹೋಲಾಹಲಗಳ ಮಧ್ಯೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅನುಮೋದನೆಗೊಂಡಿದೆ. ಮೊನ್ನೆ ರಾಜ್ಯಸಭೆಯಲ್ಲಿ ನಿಮ್ಮ ಮೊದಲ ಭಾಷಣಕ್ಕೆ ಅಡ್ಡಿಪಡಿಸಲಾಯಿತು. ಈ ಬಗ್ಗೆ ಏನು ಹೇಳುತ್ತೀರಿ?
ಸದನದಲ್ಲಿ ನನಗೆ ಮಾತನಾಡಲು ಬಿಡಲಿಲ್ಲ. ನಾನು ಸರ್ಕಾರಕ್ಕೆ ಎರಡು ಮುಖ್ಯ ವಿಷಯಗಳನ್ನು ಕೇಳಿದೆ. ಸದನದಲ್ಲಿ ಬಹುಮತ ಇಲ್ಲದಿರುವಾಗ ಮಸೂದೆಯನ್ನು ತರಾತುರಿಯಿಂದ ಏಕೆ ತರುತ್ತೀರಿ, ಆಯ್ಕೆ ಸಮಿತಿ ಅಥವಾ ಜಂಟಿ ಆಯ್ಕೆ ಸಮಿತಿ ಮುಂದೆ ಮಸೂದೆಯನ್ನು ಉಲ್ಲೇಖಿಸಿ ಎಂದು ಹೇಳಿದ್ದೆ. ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತಿದ್ದರೆ ಮೊನ್ನೆ ರಾಜ್ಯಸಭೆಯಲ್ಲಿ ನಡೆದ ಗದ್ದಲ, ಕೋಲಾಹಲದ ಘಟನೆಯನ್ನು ತಪ್ಪಿಸಬಹುದಾಗಿತ್ತು. ನಾನು ಮಾತನಾಡುತ್ತಿರುವಾಗ ಉಪ ಸಭಾಪತಿಗಳು 10 ನಿಮಿಷದಲ್ಲಿ ಮುಗಿಸಿ ಎಂದು ಹೇಳಿದರು. ಸದನದ ನಡಾವಳಿಗಳನ್ನು ನೋಡಿಕೊಂಡು ಮಾತನಾಡಲು ಮುಂದಾಗಿದ್ದೆ. ಅವರು ಮಧ್ಯದಲ್ಲಿ ಮಾತನಾಡದಂತೆ ತಡೆದರೆ ನಾನು ಏನು ಮಾಡಬೇಕು?

ಭೂ ಸುಧಾರಣೆ, ಎಪಿಎಂಸಿ ಮತ್ತು ಕೈಗಾರಿಕೆ ವಿವಾದಗಳ ಕಾಯ್ದೆ ರಾಜ್ಯದಲ್ಲಿ ವಿಧಾನ ಪರಿಷತ್ತಿನಲ್ಲಿ ವಿಫಲವಾದ ನಂತರ ರಾಜ್ಯ ಸರ್ಕಾರ ಪುನಃ ಸುಗ್ರೀವಾಜ್ಞೆಯನ್ನು ಹೊರಡಿಸುತ್ತಿದೆ, ಇದಕ್ಕೆ ಏನನ್ನುತ್ತೀರಿ?
-ಜನರ ಮುಂದೆ ಸತ್ಯ, ವಾಸ್ತವಾಂಶಗಳನ್ನು ಸರ್ಕಾರ ಮುಂದಿಡುತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ನಮ್ಮಲ್ಲಿ ಕೇವಲ 24 ಜನ ಶಾಸಕರಿದ್ದರು. ಆದರೆ ನಾವು ಎಲ್ಲಾ ವಿಷಯಗಳನ್ನು, ಸಂಗತಿಗಳನ್ನು ಜನರ ಮುಂದಿಡುತ್ತಿದ್ದೆವು. ಆ ಸಮಯದಲ್ಲಿ ಮುಖ್ಯಮಂತ್ರಿಗಳು ಕೂಡ ಹಾಗೆಯೇ ಇದ್ದರು. ಅಂತಹ ದಿನಗಳು ಮತ್ತೆ ಬರಲು ಸಾಧ್ಯವಿಲ್ಲ. ಸುಗ್ರೀವಾಜ್ಞೆ ಹೊರಡಿಸಿ ತಿದ್ದುಪಡಿಯನ್ನು ಮತ್ತೆ ಜಾರಿಗೆ ತರುತ್ತೇವೆ ಎಂದು ಸಿಎಂ ಹೇಳಿದ್ದಾರೆ. ದುರದೃಷ್ಟವಶಾತ್ ಕೋವಿಡ್-19 ಸಾಂಕ್ರಾಮಿಕ ಜನರ ಮುಂದೆ ಹೋಗುವುದಕ್ಕೆ ನಮ್ಮನ್ನು ತಡೆದಿದೆ. ನಾನು ಯಾವತ್ತಿಗೂ ರೈತರ ಪರ, ಅವರ ಕಷ್ಟಗಳನ್ನು ವಿವರಿಸಲು ನನಗೆ ಅವಕಾಶ ಸಿಗಬೇಕಿದೆ.

ರೈತರ ಗ್ರಹಿಕೆ, ಆತಂಕ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆ?
ಸರ್ಕಾರ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳೆಲ್ಲರೂ ಜನರ ಗ್ರಹಿಕೆ, ಆತಂಕಗಳನ್ನು ದೂರ ಮಾಡಬೇಕಿದೆ. ಹಲವು ನಾಗರಿಕರು ಮತ್ತು ಸಂಘ-ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿವೆ. ಅವರು ಅದನ್ನು ಮುಂದುವರಿಸಲಿ. ನಾನು ಯಾರ ಬಗ್ಗೆಯೂ ಹೇಳಿಕೆ ನೀಡುವುದಾಗಲಿ, ಟೀಕೆ ಮಾಡುವುದಾಗಲಿ ಮಾಡುವುದಿಲ್ಲ.

ಆರ್ ಆರ್ ನಗರ ಮತ್ತು ಶಿರಾ ಉಪ ಚುನಾವಣೆಗಳು ಜೆಡಿಎಸ್ ಗೆ ಎಷ್ಟು ಮುಖ್ಯ?ನಿಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೀರಾ?
-ನಾವು ಉಪ ಚುನಾವಣೆಯಲ್ಲಿ ಸೋಲುತ್ತೇವೆಯೋ, ಗೆಲ್ಲುತ್ತೇವೆಯೋ, ನಮ್ಮ ಅಭ್ಯರ್ಥಿಗಳನ್ನಂತೂ ನಿಲ್ಲಿಸುತ್ತೇವೆ. ಸಾರ್ವಜನಿಕ ಸಭೆಗಳನ್ನು ನಡೆಸಲು ಈ ಬಾರಿ ಕೋವಿಡ್ ನಿಂದಾಗಿ ಅವಕಾಶವಿಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದಷ್ಟೆ. ನನಗೆ ಪ್ರಚಾರಕ್ಕೆ ಹೋಗಲು ಸಾಧ್ಯವಾಗದಿರುವಂತಹ ಸಂದರ್ಭದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಎಂದಷ್ಟೇ ಕೇಳಿಕೊಳ್ಳುತ್ತೇನೆ.

ಸಿಎಂ ಯಡಿಯೂರಪ್ಪನವರಿಗೆ ಜೆಡಿಎಸ್ ಮೇಲೆ ಸಹಾನುಭೂತಿ ಇದೆ, ಕಾಂಗ್ರೆಸ್ ರೈತರನ್ನು ಹಾದಿತಪ್ಪಿಸುತ್ತಿದೆ ಎನ್ನುತ್ತಿದ್ದಾರೆ, ಆದರೆ ಅವರು ಜೆಡಿಎಸ್ ನ್ನು ಟೀಕೆ ಮಾಡುತ್ತಿಲ್ಲವಲ್ಲ?
-ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ನಾವು ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಹೇಳಿದ್ದೆ, ಕುಮಾರಸ್ವಾಮಿ ಕೂಡ ಹೇಳಿದ್ದಾರೆ. ನಮ್ಮ ಪಕ್ಷವನ್ನು ಬಲಪಡಿಸುವುದು ಮಾತ್ರ ನಮಗೆ ಮುಖ್ಯ. ಹಾಗೆಂದು ನಾವು ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದಲ್ಲ. ನಾವು ಈ ಹಿಂದೆ ಕೂಡ ಸಮ್ಮಿಶ್ರ ಸರ್ಕಾರ ನೋಡಿದ್ದೇವೆ. ಚುನಾವಣೆ ಬಂದಾಗ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಡುತ್ತೇವೆ.

ಜೆಡಿಎಸ್ ಮತ್ತು ಬಿಜೆಪಿ ಮತ್ತೆ ಒಂದಾಗುತ್ತದೆಯೇ?
-ಹಿಂದೆ ನಾವು ಮತ್ತು ಬಿಜೆಪಿ ಮೈತ್ರಿ ಸರ್ಕಾರ ಮಾಡಿಕೊಂಡಾಗ ಏನಾಯಿತು ಎಂದು ಈಗ ಚರ್ಚೆ ಮಾಡಿಕೊಂಡು ಕೂರಲು ಸಾಧ್ಯವೇ?, ನಾವು ಯಡಿಯೂರಪ್ಪನವರ ಬಳಿಗೆ ಹೋಗಿದ್ದೆವೆ ಅಥವಾ ಅವರು ನಮ್ಮ ಬಳಿಗೆ ಬಂದಿದ್ದರೇ, ಈಗ ಈ ಬಗ್ಗೆ ಜನರ ಮುಂದೆ ವಿವರಣೆ ಕೊಟ್ಟರೂ ಅವರು ನಂಬುವ ಸ್ಥಿತಿಯಲ್ಲಿಲ್ಲ. ನಾನು ಸಾಕಷ್ಟು ನೋಡಿದ್ದೇನೆ, ಅದನ್ನು ಚರ್ಚಿಸುವುದರಲ್ಲಿ ಈಗ ಅರ್ಥವಿಲ್ಲ.

28 ವರ್ಷಗಳ ಬಳಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರು ಖುಲಾಸೆಗೊಂಡಿದ್ದಾರೆ. ಅದಕ್ಕೆ ಏನು ಹೇಳುತ್ತೀರಿ?
-ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಲು ಸಾಧ್ಯವೇ? ಕೋರ್ಟ್ ಆದೇಶ ಬದಿಗೆ ಇಟ್ಟು ನಾವು ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com