ಬೆಂಗಳೂರು ಉಗ್ರರ ತಾಣ ಎಂಬ ತೇಜಸ್ವಿ ಸೂರ್ಯ ಹೇಳಿಕೆ ಕನ್ನಡಿಗರಿಗೆ ಮಾಡಿದ ಅಪಮಾನ: ಡಿಕೆ ಶಿವಕುಮಾರ್
ಬೆಂಗಳೂರು ಉಗ್ರರ ತಾಣವಾಗಿದೆ ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಸೋಮವಾರ ಹೇಳಿದ್ದಾರೆ.
Published: 28th September 2020 07:35 PM | Last Updated: 28th September 2020 07:35 PM | A+A A-

ಡಿಕೆ ಶಿವಕುಮಾರ್
ಬೆಂಗಳೂರು: ಬೆಂಗಳೂರು ಉಗ್ರರ ತಾಣವಾಗಿದೆ ಎಂದು ಹೇಳಿಕೆ ನೀಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಸೋಮವಾರ ಹೇಳಿದ್ದಾರೆ.
'ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಡೀ ಪ್ರಪಂಚ ಬೆಂಗಳೂರನ್ನು ನೋಡುತ್ತಿದೆ. ಜಗತ್ತಿನ ಹಲವು ದೇಶಗಳಿಗೆ ಇಂಜಿನಿಯರ್ ಗಳನ್ನು ಕೊಟ್ಟಿರುವ ನಗರ ಇದು. ಐಟಿ ಹಬ್ ಆಗಿ ಪರಿವರ್ತನೆಯಾಗಿರುವ ನಗರದ ಕುರಿತು ಈ ರೀತಿಯ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ಕರ್ನಾಟಕವನ್ನು ಭಯೋತ್ಪಾದಕರ ತಾಣ ಎನ್ನುವ ಮೂಲಕ ಅವರು ಕನ್ನಡಿಗರನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ಕುರಿತು ಅವರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.
ಬೆಂಗಳೂರಿನ ಬಗ್ಗೆ ಈ ರೀತಿ ಅವಹೇಳನಕಾರಿ ಹೇಳಿಕೆ ನೀಡುವುದು ಖಂಡನೀಯ. ನಗರವನ್ನು ಈ ರೀತಿ ಉಗ್ರರ ತಾಣ ಎನ್ನುವ ಮೂಲಕ ಸಂಸದರು ಜಿಡಿಪಿಯ ವೃದ್ಧಿಗೆ ಕೊಡಲಿ ಪೆಟ್ಟು ನೀಡಲಿದ್ದಾರೆ. ಸಂಸದರು ಈ ರೀತಿ ಹೇಳಿಕೆ ನೀಡಿದರೆ, ಯಾರು ಬಂದು ಬಂಡವಾಳ ಹೂಡುತ್ತಾರೆ? ಇದಕ್ಕೆ ಪ್ರಧಾನಿ ಮತ್ತು ಹಣಕಾಸು ಸಚಿವರ ಉತ್ತರವೇನು ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.