ಉಪಸಮರ: ಬಹಿರಂಗ ಪ್ರಚಾರಕ್ಕಿಂದು ತೆರೆ, ಸಂಭಾವ್ಯ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು!

ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಗುರುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಶುಕ್ರವಾರದಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಂಭಾವ್ಯ ಅಕ್ರಮಗಳ ಮೇಲೂ ಚುನಾವಣಾ ಆಯೋಗ ಕಣ್ಣಿಟ್ಟು ಹೆಚ್ಚಿನ ನಿಗಾವಹಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ರಂಗೇರಿದ್ದು, ಗುರುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಶುಕ್ರವಾರದಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಂಭಾವ್ಯ ಅಕ್ರಮಗಳ ಮೇಲೂ ಚುನಾವಣಾ ಆಯೋಗ ಕಣ್ಣಿಟ್ಟು ಹೆಚ್ಚಿನ ನಿಗಾವಹಿಸಿದೆ. 

ಮೂರು ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, ಮತದಾನ ಆರಂಭಗೊಳಅಳುವ 48 ಗಂಟೆಗಳ ಸಮಯವನ್ನು ಸ್ತಬ್ಧಕಾಲ ಎಂದು ಚುನಾವಣಾ ಆಯೋಗ ಕರೆದಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲಾ ಸಂಭಾವ್ಯ ಅಕ್ರಮಗಳ ಮೇಲೂ ಕಣ್ಣಿಟ್ಟು ಹೆಚ್ಚಿನ ನಿಗಾವಹಿಸಿದೆ. 

ಗುರುವಾರ ಸಂಜೆ 6 ಗಂಟೆ ಬಳಿಕ ಅಭ್ಯರ್ಥಿಗಳು ಹಾಗೂ ಸ್ಥಳೀಯರನ್ನು ಹೊರತುಪಡಿಸಿ ಬೇರೆ ಕ್ಷೇತ್ರದವರು ಇರುವಂತಿಲ್ಲ. ಆಯೋಗವು ಕೂಡ ಈಗಾಗಲೇ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದು, ಕ್ಷೇತ್ರಕ್ಕೆ ಸಂಬಂಧಪಡದವರು ಕ್ಷೇತ್ರದಿಂದ ಹೊರಗುಳಿಯುವಂತೆ ತಿಳಿಸಿದೆ. ಒಂದು ವೇಳೆ ಆಯೋಗದ ನಿರ್ದೇಶನ ಉಲ್ಲಂಘಿಸಿದ್ದೇ ಆದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. 

ಕ್ಷೇತ್ರದಲ್ಲಿನ ಎಲ್ಲಾ ಹೋಟೆಲ್, ವಸತಿ ಗೃಹ ಸೇರಿದಂತೆ ಎಲ್ಲಿಯೂ ವಾಸ್ತವ್ಯ ಹೂಡುವಂತಿಲ್ಲ. ಚುನಾವಣಾ ಆಯೋಗವು ಗುರುವಾರ ಸಂಜೆಯ ಬಳಿಕ ಎಲ್ಲಾ ಹೋಟೆಲ್, ವಸತಿ ಗೃಹ ಸೇರಿದಂತೆ ವಾಸ್ತವ್ಯ ಹೂಡುವಂತಹ ಸ್ಥಳಗಳನ್ನು ಪರಿಶೀಲನೆ ನಡೆಸಲಿದೆ. ಇದಕ್ಕಾಗಿ ಆಯೋಗವು ತಂಡವೊಂದನ್ನು ನಿಯೋಜಿಸಿದ್ದು, ಪ್ರತಿಯೊಂದರ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಎಲ್ಲಾ ಅಕ್ರಮ ಚಟುವಟಿಕೆ ಸಹ ನಿರ್ಬಂಧಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಮದ್ಯಗಳ ಅಕ್ರಮ ಸರಬರಾಜು ಬಗ್ಗೆ ಹೆಚ್ಚಿನ ನಿಗಾವಹಿಸಿದೆ. 

ಇಂದಿನಿಂದ ಚುನಾವಣಾ ಆಯೋಗ ಮೂರು ಕ್ಷೇತ್ರಗಳಲ್ಲಿ ಹೆಚ್ಚಿನ ನಿಗಾ ಇಡಲಿದೆ. ಅಗತ್ಯ ಇರುವ ಎಲ್ಲಾ ಪ್ರದೇಶಗಳಲ್ಲೂ ಸಿಬ್ಬಂದಿಗಳನ್ನು ನಿಯೋಜಿಸಿ 24*7 ಗಂಟೆಗಳ ಕಾಲ ಕಣ್ಗಾವಲಿರಿಸಲಾಗುತ್ತದೆ. ಮಸ್ಕಿಯಲ್ಲಿ ಕೆಎಸ್ಆರ್'ಪಿ ಮತ್ತು ಭದ್ರತಾ ಪಡೆಗಳನ್ನುನಿಯೋಜಿಸಲಾಗಿದೆ. ಇದಲ್ಲದೆ, ಸ್ಥಳೀಯ ಜಿಲ್ಲಾಡಳಿತ ಮಂಡಳಿ ಕೂಡ ಹಣ ಹಂಚಿಕೆ ಹಾಗೂ ಜನರ ಚಲನವಲನದ ಮೇಲೆ ಕಣ್ಗಾವಲಿರಿಸಲಿದ್ದಾರೆಂದು ಚುನಾವಣಾ ಆಯೋಗದ ಸಿಇಒ ಸಂಜೀವ್ ಕುಮಾರ್ ಅವರು ಹೇಳಿದ್ದಾರೆ. 

 ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವ ಐಎಎಸ್ ಮಾಜಿ ಅಧಿಕಾರಿ ಟಿ.ಆರ್.ರಘುನಂದನ್ ಅವರು ಮಾತನಾಡಿ, ಹಣದ ಮೂಲಕ ನಡೆಯುವ ಆಟ ಎಲ್ಲರಿಗೂ ತಿಳಿದೇ ಇದೆ. ಸಮಸ್ಯೆಗಳು ತೀವ್ರವಾಗಿದ್ದಾಗ ತೀವ್ರಕರವಾದ ಪರಿಹಾರಗಳನ್ನೇ ಹುಡುಕಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ನಡುವೆ ಆದಾಯ ತೆರಿಗೆ ಇಲಾಖೆ ಕೂಡ ಹೆಚ್ಚು ಕಣ್ಗಾವಲಿರಿಸಿದ್ದು, ಬ್ಯಾಂಕ್ ಗಳಿಂದ ಹೆಚ್ಚೆಚ್ಚು ಹಣ ಡ್ರಾ ಮಾಡುವವರು ಹಾಗೂ ವಿತರಣೆ ಮಾಡುವವರ ಮೇಲೆ ನಿಗಾಇರಿಸಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com