ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ: ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲ್

ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಇದೀಗ ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಟ್ವೀಟ್ ಮಾಡಿ ಅದನ್ನು ಸಮರ್ಥಿಸಿಕೊಂಡಿದ್ದಾರೆ.
ಎಂ ಬಿ ಪಾಟೀಲ್
ಎಂ ಬಿ ಪಾಟೀಲ್

ಬೆಂಗಳೂರು: ಕೆಲವು ದಿನಗಳ ಹಿಂದೆ ಕ್ಷೇತ್ರದ ನೀರಾವರಿ ವಿಚಾರಗಳ ಬಗ್ಗೆ ಚರ್ಚಿಸಲು ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದೆ ಎಂದಿದ್ದ ಲಿಂಗಾಯತ ಸಮುದಾಯದ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಇದೀಗ ಯಡಿಯೂರಪ್ಪರನ್ನು ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಟ್ವೀಟ್ ಮಾಡಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. 

"ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕೊಡುಗೆ ಅಪಾರವಾಗಿದೆ. ಸಿಎಂ ಆಗಿ ಅವರನ್ನು ಮುಂದುವರೆಸುವುದು ಅಥವಾ ಬದಲಾವಣೆ ಮಾಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ಪಕ್ಷದಲ್ಲಿ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಸರಿಯಿಲ್ಲ" ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ. 

"ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ". ಎಂದು ಎಂಬಿ ಪಾಟೀಲ್ ಟ್ವೀಟ್ ಮಾಡಿದ್ದರು.

ಸಿಎಂ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯ ಕುರಿತು ಊಹಾಪೋಹಗಳಿವೆ. 

ತಮ್ಮ ರಾಜೀನಾಮೆ ಕುರಿತ ವದಂತಿಗಳನ್ನು ಹೈಕಮಾಂಡ್ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಸ್ವತಃ ತಳ್ಳಿಹಾಕಿದ್ದರು. ಆದರೆ ಈ ಊಹಾಪೋಹಗಳ ನಡುವೆ ಜು.26ಕ್ಕೆ ಶಾಸಕಾಂಗ ಪಕ್ಷದ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ. 

ಈ ನಡುವೆ ಯಡಿಯೂರಪ್ಪ ಅವರಿಗೆ ಸಮುದಾಯದಲ್ಲಿರುವ ನಾಯಕರಿಂದ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದ್ದು ಕಾಂಗ್ರೆಸ್ ನ ಮತ್ತೋರ್ವ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೂ ಸಿಎಂ ನಿವಾಸಕ್ಕೆ ಭೇಟಿ ನೀಡಿ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಂದ ರಾಜೀನಾಮೆ ಕೊಡಿಸಿ ಸಿಎಂ ಬದಲಾವಣೆ ಮಾಡಿದಲ್ಲಿ, ಜೆ ಎಚ್ ಪಟೇಲ್, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಎಸ್ ಆರ್ ಬೊಮ್ಮಾಯಿ ಬದಲಾವಣೆ ಸಂದರ್ಭದಲ್ಲಿ ಆದ ಇತಿಹಾಸ ಮರುಕಳಿಸುತ್ತದೆ ಎಂದು ಎಚ್ಚರಿಸಿದ್ದಾರೆ. ಇಡೀ ರಾಜ್ಯದ ವೀರಶೈವ ಸಮುದಾಯ ಯಡಿಯೂರಪ್ಪ ಅವರ ಹಿಂದೆ ಇದೆ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com