ಯಾರ ಮೇಲೂ ಮುನಿಸುಕೊಂಡು ಬಳ್ಳಾರಿಗೆ ಬಂದಿಲ್ಲ;  ಬಿ ಶ್ರೀರಾಮುಲು

ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತಮಗೆ ಉಪ ಮುಖ್ಯಮಂತ್ರಿ ಹುದ್ದೆ ಕಲ್ಪಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ.  ನಾನು ಯಾರ ಮೇಲೂ ಮುನಿಸಿಕೊಂಡು ಬಳ್ಳಾರಿಗೆ ಬಂದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು

ಬಳ್ಳಾರಿ: ನೂತನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತಮಗೆ ಉಪ ಮುಖ್ಯಮಂತ್ರಿ ಹುದ್ದೆ ಕಲ್ಪಿಸುವುದು ಪಕ್ಷಕ್ಕೆ ಬಿಟ್ಟ ವಿಚಾರ.  ನಾನು ಯಾರ ಮೇಲೂ ಮುನಿಸಿಕೊಂಡು ಬಳ್ಳಾರಿಗೆ ಬಂದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಳ್ಳದಿರುವುದು, ಬಳ್ಳಾರಿ ನಿವಾಸದಲ್ಲಿ ಇದ್ದರೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದರಿಂದ, ಡಿಸಿಎಂ ಹುದ್ದೆಗಾಗಿ ಶ್ರೀ ರಾಮುಲು ಮುನಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನಲೆಯಲ್ಲಿ ಗುರುವಾರ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ ಈ ಸ್ಪಷ್ಟನೆ ನೀಡಿದರು.

ಪಕ್ಷದ ಬಗ್ಗೆ ತಮಗೆ ಯಾವುದೇ ಬೇಸರ ಹಾಗೂ ಮುನಿಸಿಲ್ಲ. ತಾವು ಬಿಜೆಪಿ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ಜನರಿಂದ ಮೇಲೆ ಬಂದಿದ್ದೇನೆ ಪಕ್ಷ ತಮಗೆ ಸೂಕ್ತ ಅವಕಾಶ ಕಲ್ಪಿಸಲಿದೆ ಎಂಬ ನಂಬಿಕೆ ಇದೆ. ಡಿಸಿಎಂ ವಿಚಾರದಲ್ಲಿ ಅತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ದವಾಗಿರುವೆ. ಸೂಕ್ತ ಸಮಯದಲ್ಲಿ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷ ತಮಗೆ ಎಲ್ಲ ಸ್ಥಾನ ಮಾನ ಕೊಟ್ಟಿದೆ ಎಂದರು. ಹಿಂದುಳಿದ ಸಮಾಜಕ್ಕೆ ಸೇರಿರುವ ತಮಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ವಿಶ್ವಾಸವಿದೆ ಎಂದರು.

ಜಗದೀಶ್ ಶೆಟ್ಟರ್ ಅವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾತನಾಡಲು ತಾವು ಅತ್ಯಂತ ಕಿರಿಯ ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. 

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ವಿಜಯೇಂದ್ರ ಶ್ಯಾಡೋ ಸಿಎಂ ಅಂತಿದ್ರು, ಈಗ ಯಡಿಯೂರಪ್ಪ ಶ್ಯಾಡೋ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಅಂತಾರೆ ಇದೆಲ್ಲವೂ ವಿರೋಧ ಪಕ್ಷಗಳು ಸುಖಾಸುಮ್ಮನೆ ಹೇಳೋ ಮಾತು. ನೂತನ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿಯಿದೆ. ಅಭಿವೃದ್ಧಿ ಪರ ಸರ್ಕಾರ ರಚನೆಯಾಗಿದೆ ಎಂದರು.

೨೦೨೩ ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿ ಸರ್ಕಾರ ರಚಿಸಲಿದೆ ಎಂಬ ವಿಶ್ವಾಸವಿದೆ ಎಂದು ಶ್ರೀರಾಮುಲು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com