ಯೋಗೇಶ್ವರ್-ಯತ್ನಾಳ್ ರಹಸ್ಯ ಭೇಟಿ: ಬಿಜೆಪಿಯಲ್ಲಿ ತಳಮಳ!

ಆಡಳಿತಾರೂಢ ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯಕ್ಕೆ ಮುಲಾಮು ಹಚ್ಚಲು ಯತ್ನಿಸಿದ್ದರು.
ಶಾಸಕ ಬಸನಗೌಡ ಯತ್ನಾಳ್
ಶಾಸಕ ಬಸನಗೌಡ ಯತ್ನಾಳ್

ವಿಜಯಪುರ: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇತ್ತೀಚೆಗಷ್ಟೇ ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಬೆಂಗಳೂರಿಗೆ ಬಂದು ಪಕ್ಷದಲ್ಲಿ ಬಂಡಾಯಕ್ಕೆ ಮುಲಾಮು ಹಚ್ಚಲು ಯತ್ನಿಸಿದ್ದರು.

ರಾಜ್ಯದಲ್ಲಿ ನಾಯಕತ್ವ ಬದಲಾಣೆಯಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೆ ಬಂಡಾಯ ಮಾತ್ರ ಇನ್ನೂ ರಾಜ್ಯ ಬಿಜೆಪಿಯಲ್ಲಿ ಮನೆಮಾಡಿದ್ದು, ಇದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.

ಮಹಾರಾಷ್ಟ್ರಕ್ಕೆ ತೆರಳಿ ಬೆಂಗಳೂರಿಗೆ ಬಂದಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ದೆಹಲಿಗೆ ಹಾರಿದ್ದಾರೆ. ರಮೇಶ್ ಮುಂಬೈ ಪ್ಲ್ಯಾನ್‌ ಚೇಂಜ್‌ ಮಾಡಿ, ಬೆಂಗಳೂರಿಗೆ ಬಂದಿದ್ದು ಯಾಕೆ..? ಯಾರ ಸಲಹೆಯಂತೆ ದೆಹಲಿಗೆ ಮತ್ತೆ ಹೋಗಿದ್ದಾರೆ..? ಇಲ್ಲಿ ಬೆಂಗಳೂರಿನಲ್ಲಿ ಇನ್ನೂ 2 ದಿನ ಉಳಿಯುವ ಯೋಜನೆಯಲ್ಲಿದ್ದ ರಮೇಶ್​ ಜಾರಕಿಹೊಳಿ ದಿಢೀರನೆ ದೆಹಲಿಗೆ ಇದ್ದಕ್ಕಿದ್ದಂತೆ ಹಾರಿದ್ದೇಕೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಈ ಮಧ್ಯೆ,​ ಸಚಿವ ಸಿ.ಪಿ. ಯೋಗೇಶ್ವರ್ ಅವರು ಶಾಸಕ ಬಸನಗೌಡ ಯತ್ನಾಳ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. 

ಭೇಟಿಯ ವೇಳೆ ಸಚಿವ ಯೋಗೇಶ್ವರ್'ಗೆ ಬಸನಗೌಡ ಯತ್ನಾಳ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಶಾಸಕ ಯತ್ನಾಳ್ ಹಾಗೂ ಸಚಿವ ಯೋಗೇಶ್ವರ ರಹಸ್ಯವಾಗಿ ಕೆಲ ಕಾಲ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಸಚಿವರ ಆಪ್ತ ಮೂಲಗಳು ಮಾಹಿತಿ ನೀಡಿರುವ ಪ್ರಕಾರ ಈ ನಾಯಕರಿಗೆ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ರಾಜ್ಯದ ಕೆಲ ನಾಯಕರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.  

ಯತ್ನಾಳ್ ಅವರನ್ನು ಭೇಟಿ ಮಾಡಿರುವ ಯೋಗೇಶ್ವರ್ ಅವರು ಈ ಹಿಂದೆ ಮುಖ್ಯಮಂತ್ರಿಗಳ ವಿರುದ್ಧ ಟೀಕೆ ಮಾಡಿದ್ದ ಪಂಚಮಸಾಲಿ ಮಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಇದ್ದಕ್ಕಿದ್ದಂತೆ ನಡೆದಿದ್ದು, ರಾಜ್ಯ ಬಿಜೆಪಿಯಲ್ಲಿ ತಳಮಳವನ್ನು ಶುರು ಮಾಡಿದೆ.

ಈ ನಡುವೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮತ್ತೊಬ್ಬ ನಾಯಕ ಎ.ಹೆಚ್.ವಿಶ್ವನಾಥ್ ಅವರು ಜುಲೈ ತಿಂಗಳಿನಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಕಿಡಿಕಾರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com