'ವದಂತಿಗಳು ಸುಳ್ಳು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ': ದೆಹಲಿಗೆ ಬಿ.ವೈ. ವಿಜಯೇಂದ್ರ ಪ್ರಯಾಣ

ರಾಜ್ಯದಲ್ಲಿ ಕೇಳಿ ಬರುತ್ತಿರುವ ವದಂತಿಗಳು ಸುಳ್ಳು... ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಕೇಳಿ ಬರುತ್ತಿರುವ ವದಂತಿಗಳು ಸುಳ್ಳು... ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ವಿಜಯೇಂದ್ರ ಅವರು, 'ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕೆಲವು ಕಾನೂನು ಸಮಸ್ಯೆಗಳನ್ನು ಬಗೆಹರಿಸಲು ನಾನು ದೆಹಲಿಯಲ್ಲಿದ್ದೇನೆ ಮತ್ತು ಭಾನುವಾರ ಹಿಂತಿರುಗುತ್ತೇನೆ. ಕೆಲವರು ನಾಯಕತ್ವದ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅದು ನಿಜವಲ್ಲ ಎಂದು  ಹೇಳಿದ್ದಾರೆ. ಇದೇ ವೇಳೆ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೀರಾ ಎಂದು ಕೇಳಿದಾಗ, ಇದು ನಮ್ಮ ಪ್ರವಾಸದ ಭಾಗವಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.

ರಾಜ್ಯ ಕೋವಿಡ್‌ನಿಂದ ತತ್ತರಿಸಿ ಸೋಂಕು ನಿಯಂತ್ರಣ ತಪ್ಪಿರುವ ಈ ಸಂಕಷ್ಟ ಕಾಲದಲ್ಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿಗಳು ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ನಿನ್ನೆ ದೆಹಲಿಗೆ ತೆರಳಿ  ವರಿಷ್ಠರನ್ನು ಭೇಟಿ ಮಾಡಿರುವುದು ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಗಳ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸಾರಾ ಸಗಟಾಗಿ ನಾಯಕತ್ವ ಬದಲಾವಣೆಯ ಪ್ರಸ್ತಾಪಗಳನ್ನು  ತಳ್ಳಿ ಹಾಕಿದ್ದರು. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬರುವ ಹೊತ್ತಿಗೆ ಕರ್ನಾಟಕ ಸೇರಿದಂತೆ ಇಡೀ ದೇಶ ಕೋವಿಡ್‌ನಿಂದ ತತ್ತರಿಸಿತ್ತು. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಮಾತು, ಚರ್ಚೆ ಎಲ್ಲವೂ ಪಕ್ಕಕ್ಕೆ ಸರಿದಿದ್ದವು. ಆದರೆ, ದಿಢೀರ್ ಎಂದು ನಿನ್ನೆ ಗೃಹ ಸಚಿವ ಬಸವರಾಜ ಬೊಮ್ಮಾಯಿ  ಮತ್ತು ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ರಾಜಕೀಯವಾಗಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ. 

ಮತ್ತೆ ನಾಯಕತ್ವ ಬದಲಾವಣೆ ವಿಚಾರಕ್ಕೆ ಜೀವ ಬಂದಂತಾಗಿದೆ. ಕೋವಿಡ್ ನಿಯಂತ್ರಣದಲ್ಲಿನ ವೈಫಲ್ಯ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ವರಿಷ್ಠರಲ್ಲಿ ಅಸಮಾಧಾನ ಮೂಡಿಸಿದೆ. ಹೀಗಾಗಿ, ನಾಯಕತ್ವ ಬದಲಾವಣೆಯ ಬಗ್ಗೆ ವರಿಷ್ಠ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.  ಹಾಗಾಗಿಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಿಜಯೇಂದ್ರ ದೆಹಲಿಗೆ ತೆರಳಿ ವರಿಷ್ಠರ ಮನವೊಲಿಸುವ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ನಾಯಕತ್ವ ಬದಲಾವಣೆಯ ತೀರ್ಮಾನಗಳು ಬೇಡ ಸ್ವಲ್ಪದಿನ ಸಮಯ ಕೊಡಿ, ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ.  ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಈ ಇಬ್ಬರು ವರಿಷ್ಠರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಎಲ್ಲವನ್ನೂ ಸಮಾಧಾನದಿಂದ ಆಲಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಚರ್ಚಿಸಿ ನಂತರ ಸೂಕ್ತ ತೀರ್ಮಾನಕ್ಕೆ ಬರುವ  ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ನಿರಾಕರಣೆ ವದಂತಿ ಬೋಗಸ್: ಬೊಮ್ಮಾಯಿ
ದೆಹಲಿ ನಾಯಕರು ನಾಯಕತ್ವ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂಬ ವರದಿಗಳನ್ನು ಯಡಿಯೂರಪ್ಪ ಆಪ್ತ ಹಾಗು ಸಚಿವರು ಹಾಗೂ ಶಾಸಕರುಗಳು ತಳ್ಳಿ ಹಾಕಿದ್ದು, ಆ ವಿಚಾರ ಚರ್ಚೆಗೆ ಬಸವರಾಜ ಬೊಮ್ಮಾಯಿ ಮತ್ತು ವಿಜಯೇಂದ್ರ ದೆಹಲಿಗೆ ಹೋಗಿಲ್ಲ. ಆಮ್ಲಜನಕ ಪೂರೈಕೆ ಸಂಬಂಧ ರಾಜ್ಯ ಹೈಕೋರ್ಟಿನ  ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಗರಂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ವಾಸ್ತವ ಸ್ಥಿತಿಯನ್ನು ವಿವರಿಸಲು ದೆಹಲಿಗೆ ತೆರಳಿದ್ದಾರೆ ಅಷ್ಟೆ. ನಾಯಕತ್ವ ಬದಲಾವಣೆ ಊಹಾ-ಪೋಹಾ ಎಂದು ಇವರುಗಳು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿರುವ ಬಸವರಾಜ ಬೊಮ್ಮಾಯಿ ಸಹ ಈ ವದಂತಿಗಳನ್ನು ತಳ್ಳಿ ಹಾಕಿ ನಾವು ದೆಹಲಿಗೆ ಬಂದು ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿ ಮಾಡಿರುವುದು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲ ನೆರವನ್ನು ಪಡೆಯಲು ಅಷ್ಟೆ. ನಾಯಕತ್ವ ಬದಲಾವಣೆ ವದಂತಿ ಬೋಗಸ್ ಎಂದು  ಕಿಡಿಕಾರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com