'ನನ್ನನ್ನೂ ಬಂಧಿಸಿ': ದೆಹಲಿ ಮುಖಂಡರ ಕೂಗಿಗೆ ಧ್ವನಿಗೂಡಿಸಿದ ರಾಜ್ಯ ಕಾಂಗ್ರೆಸ್ ನಾಯಕರು

ಕೋವಿಡ್‌ ಲಸಿಕೆ ರಫ್ತು ಕ್ರಮವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ದೆಹಲಿಯ ಕಾಂಗ್ರೆಸ್ ಮುಖಂಡರ ಜೊತೆಗೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರೂ ಕೂಡ ಧ್ವನಿಗೂಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್‌ ಲಸಿಕೆ ರಫ್ತು ಕ್ರಮವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ದೆಹಲಿಯ ಕಾಂಗ್ರೆಸ್ ಮುಖಂಡರ ಜೊತೆಗೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕರೂ ಕೂಡ ಧ್ವನಿಗೂಡಿಸಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಭಿತ್ತಿಪತ್ರ ಹಾಕಿದ್ದಕ್ಕಾಗಿ ಕನಿಷ್ಠ 25 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಲಾಗಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರು ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದಾರೆ. 

ಇದರಂತೆ ಕಾಂಗ್ರೆಸ್ ಮುಖಂಡರ ಜೊತೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಮಾಜಿ ಸದಸ್ಯ ರಾಜೀವ್ ಗೌಡ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿವೈ ಶ್ರೀನಿವಾಸ್ ಮತ್ತು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರು ಧ್ವನಿಗೂಡಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

‘ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ ಕ್ರಮದ ವಿರುದ್ಧ ನಾವು ಕಠಿಣವಾಗಿ ಪ್ರಶ್ನಿಸುತ್ತೇವೆ. ಧೈರ್ಯವಿದ್ದರೆ ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್'ನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ಸವಾಲು ಹಾಕಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮೊದಲಿಗೆ ಟ್ವೀಟ್ ಮಾಡಿದ್ದ ರಾಜ್ಯಸಭೆ ಸದಸ್ಯ, ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು, 25 ಜನರನ್ನು ಬಂಧಿಸಿದ ಪ್ರಕರಣದ ಹಿಂದೆಯೇ, ನಾನೂ ಇಂಥ ಭಿತ್ತಿಪತ್ರವನ್ನು ನನ್ನ ಮನೆ ಎದುರು ಹಾಕುತ್ತೇನೆ. ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ’ ಎಂದು ಸವಾಲು ಹಾಕಿದ್ದರು. 

ಪ್ರಧಾನಿ ಮೋದಿ ಅವರ ವಿರುದ್ಧ ಟೀಕಾತ್ಮಕ ಭಿತ್ತಿಪತ್ರ ಹಾಕುವುದು ಅಪರಾಧವೇ? ಈಗ ಭಾರತದಲ್ಲಿ ಮೋದಿ ದಂಡಸಂಹಿತೆ ಚಾಲ್ತಿಯಲ್ಲಿದೆಯೇ? ಅಥವಾ ಕೋವಿಡ್‌ ಪರಿಸ್ಥಿತಿಯ ನಡುವೆ ದೆಹಲಿ ಪೊಲೀಸರಿಗೆ ಬೇರೇ ಕೆಲಸವಿಲ್ಲವೇ ಎಂದು ಪ್ರಶ್ನಿಸಿದ್ದರು. 

ಇಂಥ ಭಿತ್ತಿಪತ್ರವನ್ನು ನಾನು ಮನೆ ಎದುರು ಹಾಕಿದ್ದೇನೆ. ಬನ್ನಿ, ನನ್ನನ್ನು ಬಂಧಿಸಿ’ ಎಂದು ಟ್ವೀಟ್ ಮಾಡಿ ಅದನ್ನು ದೆಹಲಿ ಪೊಲೀಸರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಟ್ಯಾಗ್‌ ಮಾಡಿದ್ದರು.

ಬಳಿಕ ಪೋಸ್ಟರ್ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಟ್ವೀಟ್ ಮಾಡಿದ್ದರು. ಇದೀಗ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

25 ಮಂದಿಯನ್ನು ಬಂಧನಕ್ಕೊಳಪಡಿಸಲು ಕಾರಣವಾಗಿರುವ ಆ ಪೋಸ್ಟರ್ ನಲ್ಲಿ ಏನಿದೆ...? 
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ನಲ್ಲಿ ಮೋದಿ ಜಿ, ನಮ್ಮ ಮಕ್ಕಳಿಗೆ ಅಗತ್ಯವಿದ್ದ ಲಸಿಕೆ ವಿದೇಶಕ್ಕೆ ಏಕೆ ಕಳಿಸಿದ್ದೀರಿ? ಎಂದು ಪ್ರಶ್ನಿಸಲಾಗಿದೆ.

ದೇಶದಲ್ಲಿ 18-44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವಲ್ಲಿ ವ್ಯತ್ಯಯಗಳು ಕಂಡು ಬರುತ್ತಿದ್ದು, ಇದಕ್ಕೆ ಲಸಿಕೆಗಳ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com