ಲಖಿಂಪುರ್ ಖೇರಿ ಹಿಂಸಾಚಾರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಖರ್ಗೆ ಆಗ್ರಹ
ರೈತರು ಸೇರಿದಂತೆ 8 ಮಂದಿ ಸಾವಿಗೆ ಕಾರಣವಾಗಿರುವ ಲಖಿಂಪುರ್ ಖೇರಿ ಹಿಂಸಾಚಾರ ಘಟನೆ ಕುರಿತು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಆಗ್ರಹಿಸಿದ್ದಾರೆ.
Published: 07th October 2021 08:00 AM | Last Updated: 07th October 2021 12:58 PM | A+A A-

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ರೈತರು ಸೇರಿದಂತೆ 8 ಮಂದಿ ಸಾವಿಗೆ ಕಾರಣವಾಗಿರುವ ಲಖಿಂಪುರ್ ಖೇರಿ ಹಿಂಸಾಚಾರ ಘಟನೆ ಕುರಿತು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಬುಧವಾರ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರಪ್ರದೇಶದ ರೈತರ ಮಾರಣ ಹೋಮ ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ರೈತರನ್ನು ಅಮಾನುಷವಾಗಿ ಕಾರು ಹತ್ತಿಸಿ ಕೊಲೆ ಮಾಡಿದ ಕೇಂದ್ರ ಸಚಿವ ಪುತ್ರನನ್ನು ಕೂಡಲೇ ಬಂಧನಕ್ಕೊಳಪಡಿಸಬೇಕು. ಇನ್ನು ಮುಂದೆ ರೈತರ ವಿರುದ್ಧ ಮಾತನಾಡುವವರು ಹಾಗೂ ಪ್ರಚೋದಿಸುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಲಂಖಿಪುರ್ ಖೇರಿ ಹಿಂಸಾಚಾರ ಪ್ರಕರಣ: ಕಾನೂನಿನ ಪ್ರಕಾರವೇ ನಿರ್ಧಾರ ಕೈಗೊಂಡಿದ್ದೇವೆ ಎಂದ ಉತ್ತಪ್ರದೇಶ ಸರ್ಕಾರ
ಕೇಂದ್ರದ ಮೂರು ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿದ ರೈತರು ನ್ಯಾಯಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆಗಳನ್ನು ಆಲಿಸುವ ಬದಲು ವಾಮಮಾರ್ಗದಲ್ಲಿ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ.
ಪ್ರಿಯಾಂಕಾ ಅವರ ಬಂಧನ ಅಕ್ರಮ ಎಂದು ಖುದ್ದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ. ಪ್ರಿಯಾಂಕಾ ಬಂಧನ ಪ್ರಕ್ರಿಯೆಯನ್ನು ಇಡೀ ದೇಶ ಪ್ರಶ್ನಿಸುತ್ತಿದೆ. ಆದರೆ ಸರ್ವಾಧಿಕಾರಿ ಮನೋಭಾವದ ಬಿಜೆಪಿ ಸರ್ಕಾರ ದೇಶದ ಜನರ ಕೂಗನ್ನು ಆಲಿಸುತ್ತಿಲ್ಲ.
ರೈತ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇಂತಹ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರೈತರ ಕುಟುಂಬಗಳನ್ನು ಭೇಟಿ ಮಾಡಲು ಅವಕಾಶ ನೀಡದ ಬಿಜೆಪಿ ಸರ್ಕಾರವೇ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.
ಇದನ್ನೂ ಓದಿ: ಭಾರತದಲ್ಲಿ ಸರ್ವಾಧಿಕಾರವಿದೆ, ರೈತರ ಮೇಲೆ ದಾಳಿ ನಡೆಯುತ್ತಿದೆ: ಉತ್ತರ ಪ್ರದೇಶದ ಯೋಗಿ ಸರ್ಕಾರ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ
ಸರ್ಕಾರಕ್ಕೆ ರೈತರ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ, ಪ್ರಕರಣವನ್ನು ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿದೆ. ಭಿನ್ನ ಧ್ವನಿಗಳನ್ನು ಅಡಗಿಸುವ ಬಿಜೆಪಿ ಹುನ್ನಾರ ಎಂದೂ ಸಫಲವಾಗದು ಎಂದು ಖರ್ಗೆ ಇದೇ ವೇಳೆ ಗುಡುಗಿದರು. ರೈತರ ನ್ಯಾಯುತ ಹೋರಾಟಕ್ಕೆ ಕಾಂಗ್ರೆಸ್ ಸದಾ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಇನ್ನು ಆರ್‌ಎಸ್‌ಎಸ್ ಕುರಿತ ತಮ್ಮ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿರುವ ಖರ್ಗೆ, ಜೀವಮಾನವಿಡಿ ಆರ್‌ಎಸ್‌ಎಸ್ ಸಿದ್ಧಾಮತ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆರ್‌ಎಸ್‌ಎಸ್ ವಿರುದ್ಧ ನನ್ನ ಹೋರಾಟ ನಿರಂತರ ಎಂದಿದ್ದಾರೆ.