ಭಾರತದಲ್ಲಿ ಸರ್ವಾಧಿಕಾರವಿದೆ, ರೈತರ ಮೇಲೆ ದಾಳಿ ನಡೆಯುತ್ತಿದೆ: ಉತ್ತರ ಪ್ರದೇಶದ ಯೋಗಿ ಸರ್ಕಾರ ಮೇಲೆ ರಾಹುಲ್ ಗಾಂಧಿ ವಾಗ್ದಾಳಿ
ದೇಶದಲ್ಲಿ ಸರ್ವಾಧಿಕಾರ ಪರಿಸ್ಥಿತಿಯಿದ್ದು, ರೈತರ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ, ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಸ್ಥರನ್ನು ಉತ್ತರ ಪ್ರದೇಶದಲ್ಲಿ ಭೇಟಿ ಮಾಡಲು ರಾಜಕೀಯ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Published: 06th October 2021 12:07 PM | Last Updated: 06th October 2021 12:17 PM | A+A A-

ರಾಹುಲ್ ಗಾಂಧಿ
ನವದೆಹಲಿ: ದೇಶದಲ್ಲಿ ಸರ್ವಾಧಿಕಾರ ಪರಿಸ್ಥಿತಿಯಿದ್ದು, ರೈತರ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ, ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಸ್ಥರನ್ನು ಉತ್ತರ ಪ್ರದೇಶದಲ್ಲಿ ಭೇಟಿ ಮಾಡಲು ರಾಜಕೀಯ ನಾಯಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾವು ಮತ್ತು ಮತ್ತಿಬ್ಬರು ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಛತ್ತೀಸ್ ಗಢ ಸಿಎಂ ಭೂಪೇಶ್ ಬಗೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರೊಂದಿಗೆ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಲಕ್ನೊ ಪೊಲೀಸ್ ಆಯುಕ್ತ ಡಿ ಕೆ ಠಾಕೂರ್ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿ ರಾಹುಲ್ ಗಾಂಧಿಯವರ ಭೇಟಿಗೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿಲ್ಲ, ಹೀಗಾಗಿ ಅವರು ಲಖಿಂಪುರ್ ಅಥವಾ ಸೀತಾಪುರ್ ಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ರಾಹುಲ್ ಗಾಂಧಿಯವರಿಗೆ ಅನುಮತಿ ನೀಡಿಲ್ಲ, ಹೀಗಾಗಿ ಅವರು ಬರಲು ಸಾಧ್ಯವಿಲ್ಲ ಎಂದು ಠಾಕೂರ್ ತಿಳಿಸಿದ್ದಾರೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನಮಗೆ ಪತ್ರ ಬರೆದು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ರಾಹುಲ್ ಗಾಂಧಿಯವರು ಭೇಟಿ ನೀಡಿದರೆ ಸಮಸ್ಯೆಯಾಗಬಹುದು, ಹೀಗಾಗಿ ಅವರಿಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ರೈತರ ಹಕ್ಕುಗಳನ್ನು ಕಸಿಯಲಾಗುತ್ತದೆ, ಕೇಂದ್ರ ಸಚಿವ ಮತ್ತು ಅವರ ಪುತ್ರರ ಹೆಸರು ಈ ಪ್ರಕರಣದಲ್ಲಿ ಬಂದರೂ ಕೂಡ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ದೇಶದ ರೈತರ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಬಿಜೆಪಿಯಲ್ಲಿ ಇಂದು ಸರ್ವಾಧಿಕಾರವಿದೆ ಎಂದು ಆರೋಪಿಸಿದರು.
ಕಳೆದ ಭಾನುವಾರ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದು ಅಲ್ಲಿ ಸದ್ಯ ನಿಷೇಧಾಜ್ಞೆ ಜಾರಿಯಲ್ಲಿದೆ. ಸೀತಾಪುರ್ ದಲ್ಲಿ ಮೊನ್ನೆ ಸೋಮವಾರದಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗೃಹಬಂಧನದಲ್ಲಿದ್ದಾರೆ.