ಹಾನಗಲ್ ಉಪಚುನಾವಣೆ: ಅಭಿವೃದ್ಧಿ ಮಂತ್ರ ಪಠಿಸಿ ಮತಯಾಚಿಸಿದ ಸಿಎಂ ಬೊಮ್ಮಾಯಿ

ಹಾನಗಲ್ ನಲ್ಲಿ ಮೂರು ದಿನಗಳ ಪ್ರಚಾರ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರು ಗುರುವಾರದಿಂದ ಆರಂಭಿಸಿದ್ದು, ಈ ವೇಳೆ ಅಭಿವೃದ್ಧಿಯ ಮಂತ್ರ ಪಠಿಸಿ, ಮತಯಾಚಿಸಿದರು.
ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ಸಿಎಂ ಬೊಮ್ಮಾಯಿ
ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ಸಿಎಂ ಬೊಮ್ಮಾಯಿ

ಹಾವೇರಿ: ಹಾನಗಲ್ ನಲ್ಲಿ ಮೂರು ದಿನಗಳ ಪ್ರಚಾರ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರು ಗುರುವಾರದಿಂದ ಆರಂಭಿಸಿದ್ದು, ಈ ವೇಳೆ ಅಭಿವೃದ್ಧಿಯ ಮಂತ್ರ ಪಠಿಸಿ, ಮತಯಾಚಿಸಿದರು.

ಮಕರವಳ್ಳಿ ಮತ್ತು ಹೊಂಕಣ ಗ್ರಾಮಗಳಲ್ಲಿ ಸರಣಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿಯವರು ಕಾಂಗ್ರೆಸ್ ಗುರಿಯಾಗಿರಿಸಿಕೊಂಡು, ಸಿಎಂ ಉದಾಸಿಯವರು ಈ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದರು.

ಉದಾಸಿ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಸಲಾಗಿದ್ದ ನೀರಾವರಿ ಯೋಜನೆಗಳು ಸೇರಿದಂತೆ ಇನ್ನಿತರೆ ಅಭಿವೃದ್ಧಿ ಯೋಜನೆಗಳನ್ನು ಹಿಡಿದ ಸಿಎಂ ಬೊಮ್ಮಾಯಿಯವರು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತ ನೀಡುವತೆ ಮನವಿ ಮಾಡಿಕೊಂಡರು.

ಅಧಿಕಾರದಲ್ಲಿದ್ದಾಗ ಹಾವೇರಿಯನ್ನು ಮರೆತಿದ್ದ ಸಿದ್ದರಾಮಯ್ಯ ಅವರು ಇದೀಗ ಹಾನಗಲ್'ಗ ಬಂದಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಅವರ ಈ ಕನಸು ನನಸಾಗಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪತನ ಈ ಉಪಚುನಾವಣೆಯಿಂದಲೇ ಆರಂಭವಾಗಲಿದೆ ಎಂದು ಹರಿಹಾಯ್ದರು.

ಹಾವೇರಿ ಜಿಲ್ಲೆಯ ಮೆಡಿಕಲ್ ಕಾಲೇಜು ತಂದದ್ದು ನಾವು, ಆದರೆ, ಅವರು ಅದನ್ನು ಬೇರೆಡೆ ತೆಗೆದುಕೊಂಡು ಹೋದರು. ಯಾವಾಗ ಬಿಜೆಪಿ ಆರಿಸಿ ಬಂದಿದೆಯೋ ಆಗ ಕ್ಷೇತ್ರದ ಅಭಿವೃದ್ಧಿ ಆಗಿದೆ. ಕಾಂಗ್ರೆಸ್ ಆಯ್ಕೆಯಾದಾಗ ಕಾಂಗ್ರೆಸ್ಸಿಗರು ಮಾತ್ರ ಅಭಿವೃದ್ಧಿ ಆಗಿದ್ದಾರೆ.

ಕಾಂಗ್ರೆಸ್ ನಾಯಕರು ವಾಸ್ತವ ಅರಿಯದೆ ವಾದ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾವು ಜನರ ಮನಸ್ಸು ಗೆಲ್ಲುವ ಮೂಲಕ ಉಪಚುನಾವಣೆ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸವೇ ನಮಗೆ ಶಕ್ತಿ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೋವಿಡ್ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಜನತೆಗೆ ಊಟ, ಆಹಾರದ ಕಿಟ್ ವಿತರಣೆ ಮಾಡಲಾಗಿದೆ. ನಯಾ ಪೈಸೆ ತೆಗೆದುಕೊಳ್ಳದೆ ವ್ಯಾಕ್ಸಿನ್ ನೀಡಲಾಗಿದೆ. ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ತಾವು ಉಚಿತವಾಗಿ ರೇಷನ್ ವಿತರಣೆ ಮಾಡಿದ್ದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ರೇಷನ್'ನ ಒಂದು ಕೆಜಿ ಅಕ್ಕಿ ರೂ.29 ಇದೆ ಎಂಬುದು ಜನತೆಗೆ ಗೊತ್ತಿರದ ವಿಷಯವಲ್ಲ. ಗುಡಿ ಕಟ್ಟಿದವರನ್ನು ಬಿಟ್ಟು ಕಳಸ ಇಟ್ಟವರನ್ನು ನೆನಪು ಮಾಡಿಕೊಂಡಂತೆ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಇಂಥ ಬೂಟಾಟಿಕೆಯ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿ, ಸಿದ್ದರಾಮಯ್ಯ ಅವರು ಮತ ಕೇಳಲು ಬಂದರೆ ಹಾನಗಲ್'ಗೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿ ಎಂದರು.

ಅಭಿವೃದ್ಧಿ ವಿಚಾರಗಳ ಹಿಡಿದು ನಾವು ಉಪಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ. ಜನರ ಹೃದಯ ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ನಾವು ಅಧಿಕಾರದಲ್ಲಿದ್ದಾಗ ಹಾವೇರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಕೊರತೆ ಎದುರಾಗಿದೆ ಎಂದು ರದ್ದು ಮಾಡಲಾಗಿತ್ತು. ಕಾಂಗ್ರೆಸ್ ವಾಸ್ತವಾಂಶವನ್ನು ಅರಿಯುವ ಅಗತ್ಯಿವಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com