ವಿಧಾನಸಭೆಗೆ ಅಪಮಾನ ಸಲ್ಲದು, ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು: ಸಿದ್ದರಾಮಯ್ಯ

ವಿಧಾನಸಭೆ ಅಧಿವೇಶನವನ್ನು ಕಾಲ,ಕಾಲಕ್ಕೆ ಕರೆಯದೇ ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭೆಗೆ ಅಪಮಾನ, ಅಪಚಾರ ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ಅಧಿವೇಶನವನ್ನು ಕಾಲ,ಕಾಲಕ್ಕೆ ಕರೆಯದೇ ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭೆಗೆ ಅಪಮಾನ, ಅಪಚಾರ ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವಾದ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಆರು ತಿಂಗಳ ಅವಧಿಯಲ್ಲಿ ವಿಧಾನಮಂಡಲ ಕಲಾಪ ನಡೆಸಬೇಕಿತ್ತು. ನಾವು ಬೆಲೆ ಏರಿಕೆಯಂತಹ ಗಂಭೀರ ವಿಚಾರಗಳನ್ನು ಎಲ್ಲಿ ಪ್ರಸ್ತಾಪಿಸಬೇಕು, ಎಲ್ಲಿ ಉತ್ತರ ಪಡೆಯಬೇಕು. ಈಗ ಕೇವಲ 10 ದಿನಗಳ ಅಧಿವೇಶನ ಕರೆಯಲಾಗಿದೆ. ಸಾಕಷ್ಟು ವಿಷಯಗಳನ್ನು ಎಲ್ಲಾ ಸದಸ್ಯರು ಪ್ರಸ್ತಾಪಿಸಲು ಅವಕಾಶ ಸಿಗದು. ಕಡೆಯ ಪಕ್ಷ ಇನ್ನೂ 10 ದಿನಗಳ ಕಾಲ ಅಧಿವೇಶನ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯದ್ದು ಡೋಂಗಿತನ, ಹುಸಿ ಹಿಂದುತ್ವ
ಇದೇ ವೇಳೆ ಹಿಂದೂ ದೇಗುಲಗಳ ತೆರವು ವಿಚಾರವಾಗಿಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ ಅವರು, ಬಿಜೆಪಿಯದ್ದು ಡೋಂಗಿತನ ಹಾಗೂ ಹುಸಿ ಹಿಂದುತ್ವ ಎಂದು ಹೇಳಿದರು. 'ನಂಜನಗೂಡು ದೇವಸ್ಥಾನ ನೆಲಸಮ ಸರ್ಕಾರದ ಗಮನದಲ್ಲಿ ಇತ್ತು.‌ 15ರಿಂದ ಎಲ್ಲಾ ನೆಲಸಮ ಮಾಡಬೇಕು ಎಂದು ಸಿಎಎಸ್ ಪತ್ರ ಬರೆದಿದ್ದರು. ಈಗ ಸಾರ್ವಜನಿಕರಿಂದ ಒತ್ತಾಯ ಹೆಚ್ಚಾದ ನಂತರ ಸರ್ಕಾರ ಬಣ್ಣ ಬದಲಾಯಿದೆ. ಅಲ್ಲದೆ ಸರ್ಕಾರದ ಗಮನಕ್ಕೆ ಬರದೆ ದೇವಸ್ಥಾನ ತೆರವು ಸಾಧ್ಯನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಂತೆಯೇ ನಂಜನಗೂಡು ದೇವಸ್ಥಾನ ಒಡೆಯಲು ಪ್ರೇರಣೆ, ಸೂಚನೆ ಮುಖ್ಯ ಕಾರ್ಯದರ್ಶಿ ಪತ್ರವಾಗಿದೆ. ಬಿಜೆಪಿಯವರು ಹೇಳೋದು ಹಿಂದುತ್ವ. ಹಿಂದು ದೇವಾಲಯವನ್ನು ಇವರ ಸರ್ಕಾರವೇ ನಾಶ ಮಾಡಿದೆ. ಮಾತು ರಾಮನ ಜಪ ಇಲ್ಲಿ ದೇವಸ್ಥಾನ ಕೆಡವೋದು.‌ ಗಮನಕ್ಕೆ ತರದೆ ಯಾವುದೇ ಚರ್ಚೆ ಮಾಡದೆ ನೆಲಸಮ ಮಾಡಿದ್ದು ಇವರ ಡೋಂಗಿತನ, ಹುಸಿ ಹಿಂದುತ್ವ ತೋರಿಸುತ್ತೆ. ಇವರಿಗೆ ರಾಜಕೀಯ ಹಿಂದುತ್ವ ದೇವರು ಹಾಗೂ ದೇವಸ್ಥಾನದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಸರ್ಕಾರ 'ಕ್ರಿಮಿನಲ್ ಲೂಟ್' ಮಾಡ್ತಿದೆ
ನಿಯಮ 69 ರ ಅಡಿಯಲ್ಲಿ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, 'ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ನಾವು ಎತ್ತಿನ ಗಾಡಿಯಲ್ಲಿ ಬಂದೆವು ಆದರೆ ಇದಕ್ಕೆ ಸಾಕಷ್ಟು ಟೀಕೆ ಬಂತು. 1973 ರಲ್ಲಿ ಪಾರ್ಲಿಮೆಂಟ್ ಗೆ ಮಾಜಿ ಪ್ರಧಾನಿ ವಾಜಪೇಯಿಯವರು ಸಹ ಎತ್ತಿನಗಾಡಿಯಲ್ಲಿ ಬಂದಿದ್ದರು. ಆಗ ಕೇವಲ ಏಳು ಪೈಸೆ ಇಂಧನ ದರ ಹೆಚ್ಚಾಗಿತ್ತು, ಅಷ್ಟಕ್ಕೇ ವಾಜಪೇಯಿಯವರು 'ಕ್ರಿಮಿನಲ್ ಲೂಟ್' ಎಂದು ಇಂದಿರಾಗಾಂಧಿ ಸರ್ಕಾರದ ಮೇಲೆ ಆರೋಪ ಮಾಡಿದ್ರು. ನಾನು ಕೆಟ್ಟ ಪದ ಬಳಸಲ್ಲ, ವಾಜಪೇಯಿ ಬಳಸಿದ ಪದ ಬಳಸುತ್ತೇನೆ. ಈ ಸರ್ಕಾರವೂ ಕ್ರಿಮಿನಲ್ ಲೂಟ್ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಕಿ ಅಂಶಗಳೊಂದಿಗೆ ಸರ್ಕಾರದ ವಿರುದ್ಧ ವಾಗ್ದಾಳಿ
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸಿದ್ದರಾಮಯ್ಯ ಅಂಕಿ ಅಂಶಗಳ ಜೊತೆ ಸದನದಲ್ಲಿ ಗಮನ ಸೆಳೆದರು. 2012 - ಕಚ್ಚಾ ತೈಲ ದರ ಒಂದು ಬ್ಯಾರಲ್ ಗೆ 125.45 ಡಾಲರ್ ಇತ್ತು.‌ ಆ ಸಂದರ್ಭದಲ್ಲಿ 71.13 ಪೆಟ್ರೋಲ್ ದರ ಇದ್ದರೆ ಡೀಸೆಲ್ ದರ 40.91 ಇತ್ತು. 2013 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 107.97 ಇದ್ದಾಗ ಪೆಟ್ರೋಲ್ ದರ 71.13 ಇತ್ತು ಹಾಗೂ ಡೀಸೆಲ್ ದರ 46.13 ಇತ್ತು. 2014 ರಲ್ಲಿ ಕಚ್ಚಾ ತೈಲ ದರ ಬ್ಯಾರಲ್ ಗೆ 105.52 ಡಾಲರ್ ಇದ್ದಾಗ ಪೆಟ್ರೋಲ್ ದರ 80.11 ಹಾಗೂ ಡೀಸೆಲ್ ದರ 55.48 ಇತ್ತು. ಇದಾದ ಬಳಿಕ 2015 ರಲ್ಲಿ ಕಚ್ಚಾ ತೈಲ ದರ 84.16, 2016 ರಲ್ಲಿ 46.17, 2018 ರಲ್ಲಿ 56.43, 2019 ರಲ್ಲಿ 49.88, 2020 ರಲ್ಲಿ 63.93 ಹಾಗೂ ಇದೀಗ ಬ್ಯಾರಲ್ ಗೆ 69 ಡಾಲರ್ ಇದೆ ಆದರೂ ದರ ಏರಿಕೆ ಆಗುತ್ತಿದೆ ಎಂದು ಆರೋಪಿಸಿದರು. 

ಈ ವೇಳೆ ಮಧ್ಯಪ್ರವೇಶ ಮಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ, ಇದು ಪಾರ್ಲಿಮೆಂಟ್ ಭಾಷಣವೋ? ಅಸೆಂಬ್ಲಿ ಭಾಷಣವೋ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರಾದ ಆರ್.‌ಅಶೋಕ್ ಹಾಗೂ ಸುಧಾಕರ್ ಧ್ವನಿಗೂಡಿಸಿದರು. ಈ ವೇಳೆ ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ನಮಗೆ ಉತ್ತರದ ಅಪೇಕ್ಷೆ ಇಲ್ಲ ಆದರೆ ಸಿದ್ದರಾಮಯ್ಯ ಬೆಲೆ ಏರಿಕೆ ಬಗ್ಗೆ ಹೇಳುತ್ತಿದ್ದಾರೆ ಮಾತನಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು.‌ 

ತೈಲ ಬಾಂಡ್ ಮೊದಲು ಪ್ರಸ್ತಾಪ ಮಾಡಿದ್ದೇ ವಾಜಪೇಯಿ
ಬಳಿಕ ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ, ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ, ಸದನದ ಮುಂದೆ ಸತ್ಯಾಂಶವನ್ನು ಇಡುತ್ತಿದ್ದೇನೆ. ಬೆಲೆ ಏರಿಕೆ ಬಗ್ಗೆ ನಾನು ಸುಮ್ಮನಿರಬೇಕಾ? ಎಂದು ಗರಂ ಆದರು. ಬೆಲೆ ಏರಿಕೆಗೆ ತೈಲ ಬಾಂಡ್, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ ಏರಿಕೆ ಕಾರಣ ಎಂದು ಬಿಜೆಪಿಗರು ಹೇಳುತ್ತಾರೆ, ಇದು ಸರಿಯಲ್ಲ ಬೆಲೆ ಏರಿಕೆ ಬಗ್ಗೆ ಸದನದ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸೋಣ ಎಂದು ಸಲಹೆ ನೀಡಿದರು. ಕರ್ನಾಟಕ ಪೆಟ್ರೋಲ್ ಮೇಲೆ 35% ಅಬಕಾರಿ ಸುಂಕ ಹಾಕಿದೆ. 24% ಡೀಸೆಲ್ ಮೇಲೆ ಹಾಕಲಾಗಿದೆ.‌ ಕೇಂದ್ರ ಸರ್ಕಾರ ಕರ್ನಾಟಕದಿಂದ ಕಳೆದ ಏಳು ವರ್ಷದಲ್ಲಿ 1,20,000 ಕೋಟಿ ಅಬಕಾರಿ ಸುಂಕ‌ ಸಂಗ್ರಹಿಸಿದೆ ಎಂದು ತಿಳಿಸಿದರು.

ವಾಜಪೇಯಿಯವರ ಕಾಲದಲ್ಲಿ ತೈಲ ಬಾಂಡ್ ಪ್ರಸ್ತಾವವಿತ್ತು‌ ಅದನ್ನು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು.‌ ತೈಲ ಬಾಂಡ್ ಖರೀದಿಸಿದ್ದು ಗ್ರಾಹಕರ ಮೇಲೆ ಬರೆ ಬೀಳದಿರಲಿ ಎಂದು, ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಗೆ ಹೊರೆ ಆಗಬಾರದು ಎಂದು ತೈಲ ಬಾಂಡ್ ಖರೀದಿಸಿತ್ತು ಯುಪಿಎ ಸರ್ಕಾರ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com