ರೈತರದ್ದು ಪ್ರಾಯೋಜಿತ ಪ್ರತಿಭಟನೆ ಎಂದ ಸಿಎಂ ಬೊಮ್ಮಾಯಿ ವಿರುದ್ದ ಸಿದ್ದರಾಮಯ್ಯ ತೀವ್ರ ಕಿಡಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆ ವಿರುದ್ಧದ ರೈತರ ಪ್ರತಿಭಟನೆಯನ್ನು ಪ್ರಾಯೋಜಿತ ಪ್ರತಿಭಟನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರಿಗೆ ಅವಮಾನ ಮಾಡಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಟಾಂಗಾ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು
ಟಾಂಗಾ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆ ವಿರುದ್ಧದ ರೈತರ ಪ್ರತಿಭಟನೆಯನ್ನು ಪ್ರಾಯೋಜಿತ ಪ್ರತಿಭಟನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತರಿಗೆ ಅವಮಾನ ಮಾಡಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. 

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ವಿಧಾನಮಂಡಲದ ಅಧಿವೇಶನದ ಕೊನೆಯ ದಿನವೂ ಕೂಡ ಕಾಂಗ್ರೆಸ್ ನಾಯಕರು ಟಾಂಗಾದಲ್ಲಿ ವಿಧಾನಸೌಧಕ್ಕೆ ಆಗಮಿಸಿ ವಿಭಿನ್ನ ಹೋರಾಟ ನಡೆಸಿದರು. 

ಟಾಂಗಾ ಮೂಲಕ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದರು. 

ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ನಾವು ಇಂದು ಬೆಲೆ ಏರಿಕೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಮೂರನೇ ದಿನದ ಹೋರಾಟವಾಗಿದೆ ಮೊದಲನೇ ದಿನ ಎತ್ತಿನ ಗಾಡಿಯಲ್ಲಿ ಪ್ರತಿಭಟನೆ, 2ನೇ ದಿನ ಸೈಕಲ್‍ನಲ್ಲಿ. ಇಂದು ಟಾಂಗಾ ಗಾಡಿಯಲ್ಲಿ ಬಂದು ಪ್ರತಿಭಟನೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟಿದೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಇಂತಹ ಕೆಟ್ಟ ಸರ್ಕಾರವನ್ನು ರಾಜಕೀಯ ಜೀವನದಲ್ಲಿ ನೋಡಿಲ್ಲ. ಬಿಜೆಪಿಯವರು ಎಂದೂ ಜನಪರವಲ್ಲ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಜನರ ಹಾದಿ ತಪ್ಪಿಸುವುದೇ ಇವರ ಕೆಲಸ ಲಜ್ಜೆಗೆಟ್ಟವರು ಇವರು ಭಂಡರು. ನಿಜವಾಗಿಯೂ ರೈತರ ಪರ, ಬಡವರ ಪರ ಇದ್ದರೆ ಕನಿಷ್ಠ 10 ರೂಪಾಯಿ ಕಡಿಮೆ ಮಾಡಿ ಎಂದು ಆಕ್ರೋಶವ್ಯಕ್ತಪಡಿಸಿದರು.

ಮನೆಯಲ್ಲಿ ಹೆಂಡತಿ ಚಿನ್ನದ ಸರ ಅಡ ಇಡುವ ಪರಿಸ್ಥಿತಿ ಬಂದಿದೆ. ಇದರಿಂದ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಕಾರ್ಪೊರೇಟ್ ಕಂಪನಿಯ ಇರ್ತಾರೆ. ಕಾಂಗ್ರೆಸ್ ಬಡವರ ಪರ ಇದೆ. ರೈತರು ಸಾಮನ್ಯ ವರ್ಗದವರ ಧ್ವನಿಯಾಗಿ ಪ್ರತಿಭಟನೆ ಮಾಡ್ತಿದ್ದೇವೆ. ಈ ಸರ್ಕಾರ ಕಿತ್ತ ಹಾಕುವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದ ಹಾಗೇ. ಸಾಮಾನ್ಯ ಜನರು ಮತ್ತು ರೈತರನ್ನ ದಾರಿ ತಪಿಸುವ ಕೆಲಸ ಬಿಜೆಪಿ ಮಾಡುತ್ತಿದ್ದಾರೆ. ಒಂದು ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ನಾವು 10 ರೂಪಾಯಿ ಕಡಿಮೆ ಮಾಡುತ್ತಿದ್ದೆವು. ಬಿಜೆಪಿಯವರು ಲಜ್ಜಗೆಟ್ಟವರು ಬಂಡೆಗೆಟ್ಟವರು ದಪ್ಪ ಚರ್ಮದವರು. ಮಾನಮಾರ್ಯದೆ ಇಲ್ಲದವರು ಬಿಜೆಪಿಯವರು ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ನಡುವೆ ಕಾಂಗ್ರೆಸ್ ವಿರುದ್ದ ಸಚಿವ ಆರ್. ಅಶೋಕ್ ಕೂಡ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನವರು ಸೋತು ಸುಣ್ಣವಾದ ಮೇಲೆ‌‌ ದಿನಕ್ಕೊಂದು ಗಿಮಿಕ್ ಮಾಡುತ್ತಿದ್ದಾರೆಂದು ಟಾಂಗ್ ನೀಡಿದ್ದಾರೆ. 

ಯಾವತ್ತಾದರು ಪೆಟ್ರೋಲ್‌ ಡಿಸೆಲ್ ಬೆಲೆ‌ ಕಮ್ಮಿ‌ಯಾಗಿದೆಯೇ? ಕಾಂಗ್ರೆಸ್ ನವರಿದ್ದಾಗ ಬೆಲೆ ಏರಿಕೆಯಾದರೆ ಆರ್ಥಿಕ ಸುಧಾರಣೆಗಾಗಿ ಎನ್ನುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯಾದರೆ ಅದು ಅಕ್ರಮ ಅನೈತಿಕ ಎನ್ನುತ್ತಾರೆ ಎಂದು ಹೇಳಿದ್ದಾರೆ. 

ಅವರ ಪಾರ್ಟಿಯನ್ನು ಯಾಕೆ ಬೆಳೆಸಲು ಆಗಿಲ್ಲವೆಂದು ಆತ್ಮವಿಮರ್ಶೆ ಮಾಡುತ್ತಿದ್ದರು. ಮೂಲೆ ಗುಂಪು ಆಗಿರುವ ಕಾಂಗ್ರೆಸ್ ಟಾಂಗಾ ಓಡಿಸುವುದು, ಸೈಕಲ್ ಓಡಿಸಲು ಮಾತ್ರ ಸೀಮಿತವಾಗಿದೆ ಎಂದರು.

ಇದೇ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಭಾಷಣವನ್ನು ಬಹಿಷ್ಕರಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ದ ತೀವ್ರ ಕಿಡಿಕಾರಿದರು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ರಾಜ್ಯ ವಿಧಾನಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಹಲವು ಉದಾಹರಣೆಗಳಿವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com